5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್‌ ಪೋಲಿಯೋ ಹನಿ ಹಾಕಿಸಿ: ಶಾಸಕ ಐಹೊಳೆ

5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್‌ ಪೋಲಿಯೋ ಹನಿ ಹಾಕಿಸಿ: ಶಾಸಕ ಐಹೊಳೆ  Administer pulse polio drops to all children under 5 years of age: MLA Aihole

ರಾಯಬಾಗ 28: ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್‌ ಪೋಲಿಯೋ ಹನಿ ಹಾಕಿಸಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಕರೆ ನೀಡಿದರು.  

ಭಾನುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮಕ್ಕಳ ಆರೋಗ್ಯವೇ ದೇಶದ ಅಮೂಲ್ಯ ಸಂಪತ್ತು. ಪೋಲಿಯೋ ಎಂಬ ಮಾರಕ ಕಾಯಿಲೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.  

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿನೋದ ಗಸ್ತಿ ಮಾತನಾಡಿ, ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮವು ಜೂನ್ 28ರಿಂದ ಜುಲೈ 1ರವರೆಗೆ ತಾಲೂಕಿನ ಎಲ್ಲ ಲಸಿಕಾ ಕೇಂದ್ರಗಳಲ್ಲಿ ನಡೆಯಲಿದೆ. 5 ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.  

ತಾಲೂಕಿನಲ್ಲಿ 5 ವರ್ಷದೊಳಗಿನ 47,533 ಮಕ್ಕಳು ಇದ್ದು, ಲಸಿಕೆ ನೀಡಲು 217 ಬೂತ್ಗಳನ್ನು ಸ್ಥಾಪಿಸಲಾಗಿದೆ. ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ 53 ಮೇಲ್ವಿಚಾರಕರು, 430 ತಂಡಗಳು ಹಾಗೂ 868 ಲಸಿಕೆದಾರರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ತಹಸೀಲ್ದಾರ ಮಹಾದೇವ ಸನಮುರಿ, ಡಾ. ಎಸ್‌.ಎಸ್‌. ಕರಗಾಂವೆ, ಡಾ. ಮಹಂತಪ್ಪ ಮಾಳಿ, ನಂದಕುಮಾರ ಪಾಟೀಲ, ಶೋಭಾ ಸಂಕನ್ನವರ, ಶ್ರೀಶೈಲ ಹೊಸೂರ, ಪುಷ್ಪಾ ಭೋಸಲೆ, ಡಿ.ಎನ್‌. ಹಳ್ಳಿ, ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.