ಕಾಗವಾಡ

20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣಗಳ ಆರೋಪಿ ಬಂಧನ

20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣಗಳ ಆರೋಪಿ ಬಂಧನ

ಲೋಕದರ್ಶನ ವರದಿ  

ಕಾಗವಾಡ, ಆ.25: ಸುಮಾರು 20 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಲವು ಕಳ್ಳತನ ಪ್ರಕರಣಗಳ ಆರೋಪಿಯನ್ನು ಕಾಗವಾಡ ಠಾಣೆ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಮಹಾರಾಷ್ಟ್ರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಜೈತಾಪುರ ಗ್ರಾಮದಲ್ಲಿ ವಾಸವಾಗಿದ್ದ ಸಾಗರ ಮಹಾದೇವ ಪೊಕಳೆ ಬಂಧಿತ ಆರೋಪಿ. ಮೂಲತಃ ಕಾಗವಾಡ ತಾಲ್ಲೂಕಿನ ಉಗಾರ ಖುರ್ದ್‌ ಪಟ್ಟಣದ ನಿವಾಸಿಯಾಗಿರುವ ಈತನ ವಿರುದ್ಧ 2006ರಲ್ಲಿ ಕಾಗವಾಡ ಪೊಲೀಸ್ ಠಾಣೆಯಲ್ಲಿ ಒಟ್ಟು 11 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ನಂತರ ನ್ಯಾಯಾಲಯಕ್ಕೆ ಹಾಜರಾಗದೆ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದನು.  

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರಿ​‍್ಬ. ಬಸರ್ಗಿ ಹಾಗೂ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಅಥಣಿ ಸಿಪಿಐ ಸಂತೋಷ ಹಳ್ಳೂರ ಅವರ ನೇತೃತ್ವದಲ್ಲಿ ಪಿಎಸ್‌ಐ ರಾಘವೇಂದ್ರ ಖೋತ ಅವರನ್ನೊಳಗೊಂಡ ಅಪರಾಧ ತನಿಖಾ ತಂಡವು ತಾಂತ್ರಿಕ ವಿಭಾಗದ ನೆರವಿನಿಂದ ಕಾರ್ಯಾಚರಣೆ ನಡೆಸಿ, ಮಹಾರಾಷ್ಟ್ರದ ಜೈತಾಪುರದಲ್ಲಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.  

ಈ ಕಾರ್ಯಾಚರಣೆಯಲ್ಲಿ ಕಾಗವಾಡ ಠಾಣೆಯ ಸಿಪಿಸಿ ಸಿಬ್ಬಂದಿಯಾದ ಎಂ.ಎಂ. ಜಂಬಗಿ, ಆರ್‌.ಕೆ. ಧುಮಾಳೆ, ಅಥಣಿ ಡಿವೈಎಸ್ಪಿ ಕಚೇರಿಯ ಎಸ್‌.ಟಿ. ಮಗಳದಮ್ಮ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ ಸಕ್ರಿಯವಾಗಿ ಪಾಲ್ಗೊಂಡಿದ್ದರು.  ಕಾರ್ಯಾಚರಣೆಯ ಯಶಸ್ಸಿಗೆ ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ. 


ಸುದ್ದಿ ಓದಿ