ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಕಸ್ಮಿಕ ಬೆಂಕಿ: ಉಮೇಶ ಲಮಾಣಿ ಭೇಟಿ

ಮುದ್ದೇಬಿಹಾಳ 28: ತಾಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯ ಕೃಷ್ಣಾ ನದಿ ತೀರದ ಘಾಳಪೂಜಿ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಘಟನೆ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಮಂಗಳವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ಕೊಠಡಿಯಲ್ಲಿ 18 ವಿದ್ಯಾರ್ಥಿಗಳಿದ್ದಾಗ ಘಟನೆ  

ದಿ. 25 ರಂದು ರಾತ್ರಿ 12 ಗಂಟೆ ಸುಮಾರಿಗೆ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಸತಿ ನಿಲಯದ ಘಟನೆ ನಡೆದ ಕೊಠಡಿಯಲ್ಲಿ 18 ವಿದ್ಯಾರ್ಥಿಗಳು ರಾತ್ರಿ ಮಲಗಿದ್ದಾಗ ವಿದ್ಯುತ್ ಶಾಟ್ ಸರ್ಕ್ಯೂಟನಿಂದ ಏಕಾಏಕಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಅಲ್ಲೇ ಮಲಗಿದ್ದ ವಿದ್ಯಾರ್ಥಿಯೊಬ್ಬ ಇನ್ನುಳಿದ 17 ಜನ ವಿದ್ಯಾರ್ಥಿಗಳನ್ನು ಜೋರಾಗಿ ಕೂಗಿ ಬಾಯಿ ಬಾಯಿ ಬಡಕೊಂಡು ನಿದ್ರೆಗೆ ಜಾರಿದ್ದು ವಿದ್ಯಾರ್ಥಿಗಳನ್ನು ಎಬ್ಬಿಸುತ್ತಿದ್ದಂತೆ ಸಂಪೂರ್ಣ ಕೊಠಡಿ ತುಂಬೆಲ್ಲ ಬೆಂಕಿ ಉಗಿ ವ್ಯಾಪಿಸಿ ಬಾಗಿಲು ತೆರೆದು ಹೊರಗೆ ಓಡಿ ಬಂದಿದ್ದಾರೆ.  ಬಳಿಕ ವಾರ್ಡನ್ ಮತ್ತು 10 ನೇ ತರಗತಿ ವಿದ್ಯಾರ್ಥಿಗಳು ಧಾವಿಸಿ ಪಕ್ಕದಲ್ಲಿಯೇ ಇದ್ದ ನೀರಿನಿಂದ ಬೆಂಕಿ ನಂದಿಸಿದ್ದರಿಂದ ಆಗುವ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಈ ಸಂದರ್ಭದಲ್ಲಿ ಕೊಠಡಿಯಲ್ಲಿರುವ ಎಲ್ಲ ವಿದ್ಯಾರ್ಥಿಗಳ ಬಟ್ಟೆ, ಬೆಡ್ ಗಳು, ಪುಸ್ತಕಗಳು ಬಾಗಿಲು ಕಿಟಕಿಗಳು ಸೇರಿದಂತೆ ಹಲವು ಅಗತ್ಯ ವಸ್ತುಗಳು ಸಂಪೂರ್ಣ ಸುಟ್ಟು ಹಾಳಾಗಿ ಹೋಗಿವೆ. ಮಾತ್ರವಲ್ಲದೇ 6ನೇ ತರಗತಿಯ ವಿದ್ಯಾರ್ಥಿಗಳಾದ ಸಾಗರ ಮಾದರ, ಸಮರ್ಥ ಭಜಂತ್ರಿ,  ಮಲ್ಲಿಕಾರ್ಜುನ ಭಜಂತ್ರಿ ಮೂವರಲ್ಲಿ ಇಬ್ಬರಿಗೆ 6ನೇ ತರಗತಿಯ ಓರ್ವ ವಿದ್ಯಾರ್ಥಿಗೆ ಕೈಕಾಲು ಸುಟ್ಟು ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಬಿಎಲ್ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ ವಿದ್ಯಾರ್ಥಿಗೆ ಮೂಗು, ಕೆನ್ನೆ, ಕಿವಿಗೆ ಝಳ ತಾಕಿದ್ದು ಪ್ರಾಥಮಿಕ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾನೆ. ಅಲ್ಪ ಸ್ವಲ್ಪ ಗಾಯಗೊಂಡು ಚಿಕಿತ್ಸೆ ಪಡೆದುಕೊಂಡಿದ್ದರೇ ಇನ್ನೊಬ್ಬ ಸಮರ್ಥ ಭಜಂತಿ ವಿದ್ಯಾರ್ಥಿಗೆ ತುಂಬಾ ಗಂಭೀರ ಗಾಯಗೊಂಡು ಸಧ್ಯ ಬಿ ಎಲ್ ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

6 ತಿಂಗಳಲ್ಲಿ 2ನೇ ಬಾರಿ ಘಟನೆ: ಆಕ್ರೋಶ  

ಶಾಲೆ ಉದ್ಘಾಟನೆಗೊಂಡ ಆರು ತಿಂಗಳಲ್ಲಿಯೇ ಇದು ಎರಡನೇ ಘಟನೆ ಎನ್ನಲಾಗಿದೆ. ಅಗ್ನಿ ಅವಘಡ ಸಂಭವಿಸಿದ್ದರೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸದೆ ಮುಚ್ಚಿ ಹಾಕುವ ಪ್ರಯತ್ನಗಳು ನಡೆದಿದ್ದವು ಎಂದು ಮೂಲಗಳು ತಿಳಿಸಿವೆ. 

ಅವ್ಯವಸ್ಥೆಯ ಆಗರವಾದ ವಸತಿ ನಿಲಯ  

ಘಾಳಪೂಜಿ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಲಯದ ಕೊಠಡಿಗಳಲ್ಲಿ, ಮುಖ್ಯದ್ವಾರದಲ್ಲಿ, ಊಟದ ಕೊಠಡಿಯಲ್ಲಿ ಅಳವಡಿಸಿದ್ದ ವಿದ್ಯುತ್ ದೀಪದ ಟ್ಯೂಬ್ ಲೈಟುಗಳು ಕೇವಲ ಕೇಬಲ್ ಮೇಲೆ ನಿಂತು ಜೋತಾಡುತ್ತಿವೆ. ಮಾತ್ರವಲ್ಲದೇ ಜೇಡರ ಬಲೆ ಬೆಳೆದು ನಿಂತಿದೆ. ಶೌಚಾಲಯಗಳು ಸಂಪೂರ್ಣ ಸ್ವಚ್ಛತೆಯಿಲ್ಲದೇ ಗಬ್ಬು ದುರ್ನಾತ ಬೀರುತ್ತಿವೆ. ವಿದ್ಯುತ ಬಟನ್ ಒಡೆದು ಹಾಳಾಗಿ ಹೋಗಿ ವಿದ್ಯುತ್ ಕೇಬಲ್‌ಗಳನ್ನು ಬೇಕಾಬಿಟ್ಟಿಯಾಗಿ ಹೊರಗೆ ಬಿಟ್ಟಿದ್ದರಿಂದ ಯಾವಾಗ ಯಾವ ವಿದ್ಯುತ್ ಅವಘಡ ಸಂಭವಿಸುತ್ತದೆಯೋ ಏನು ಎಂಬುದು ಅಪಾಯದ ಸ್ಥಿತಿಯಲ್ಲಿವೆ.  ಟೈಲ್ಸ್‌ಗಳು ಎಂದೋ ಯಾವಾಗಲೋ  ತೊಳೆದದ್ದು ಹಾಗೇ ಇವೆ. ಆದರೇ ನಿತ್ಯ ಸ್ವಚ್ಛತೆ ಮಾಡುವ ಯೋಗ ಇಲ್ಲಿ ಇಲ್ಲವೆಂದು ಎದ್ದು ಕಾಣುತ್ತದೆ. ಮಕ್ಕಳಿಗೆ ನಿತ್ಯ ಕೊಡುವ ಆಹಾರದಲ್ಲಿ ಗುಣಮಟ್ಟ ಕಳೆದುಕೊಂಡಿದೆ. ಸರಿಯಾಗಿ ಕೊಡುತ್ತಿಲ್ಲ ಎಂಬ ಆರೋಪ ಕೆಲ ವಿದ್ಯಾರ್ಥಿಗಳಿಂದ ಕೇಳಿಬಂದವು. ಇದಕ್ಕೆಲ್ಲ ವಾರ್ಡನ್ ಶಿವಲಿಂಗ ಕಾಂಬಳೆ ಅವರು ಮೇಲ್ವಿಚಾರಣೆ ಸಂಪೂರ್ಣ ನಿರ್ಲಕ್ಷತನಕ್ಕೆ ಸಾಕ್ಷಿಯಾಗಿದೆ. 

 ಈಗಾಗಲೇ ಮುರಾರ್ಜಿ ವಸತಿ ಶಾಲೆಯಲ್ಲಿ ನಡೆದ ಅಗ್ನಿ ದುರಂತ ಸತ್ಯವಾಗಿದೆ ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂಬದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೂ ಈ ಘಟನೆಗೆ ಕಾರಣ ಹೇಗಾಯ್ತು ಎಂಬುದರ ಬಗ್ಗೆ ಹೆಚ್ಚಿನ ತನಿಖೆಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಮೇಲಾಧಿಕಾರಿಗಳಿಗೆ ವಾಸ್ತವ ವರದಿ ಸಲ್ಲಿಸಲಾಗುವುದು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಘಟನೆಯ ಕುರಿತು ಮಾಹಿತಿ ನೀಡಿದರು. 

ಪರಸ್ಪರ ಕಚ್ಚಾಟ 

ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯ ಕೃಷ್ಣಾ ನದಿ ತೀರದ ಘಾಳಪೂಜಿ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಘಟನೆ ಹಿನ್ನೆಲೆಯಲ್ಲಿ ವಿವಿಧ ಅಧಿಕಾರಿಗಳು ಬೇಟಿ ನೀಡಿ ಪರೀಶೀಲಿಸುತ್ತಿರುವ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ದುಂಡಪ್ಪ ವಡಜೇ ಅವರು ವಸತಿ ನಿಲಯದ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ. ನಿಲಯದ ಕೊಠಡಿಗಳ ದುರಸ್ತಿ ಹಾಗೂ ಸ್ವಚ್ಛತೆ ಹಾಗೂ ಊಟದ ವ್ಯವಸ್ಥೆ ಸರಿಯಾಗಿ ನೋಡಿಕೊಳ್ಳಬೇಕಲ್ಲವೇ ಹೀಗೇನಾ ನೀವು ಕೆಲಸ ಮಾಡುವುದು ಎಂದು ವಾರ್ಡನ್ ಶಿವಲಿಂಗ ಕಾಂಬಳೆ ಅವರ ಮೇಲೆ ಅಧಿಕಾರಿಗಳ ಮುಂದೆಯೇ ಹರಿಹಾಯ್ದದ್ದರಿಂದ ಪರಸ್ಪರ ಮಾತಿನ ವಾಕ್ಸಮರ ನಡೆಯಿತು.  

ತಡವಾಗಿ ಎಚ್ಚೆತ್ತುಕೊಂಡು ತಹಶೀಲ್ದಾರ ಬಸವರಾಜ ನಾಗರಾಳ ಹಾಗೂ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ ಘಟನಾ ಸ್ಥಳಕ್ಕೆ ಸಂಜೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.