ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದು, ನೇರ ವೇತನ ಜಾರಿಗೆ ಆಗ್ರಹಿಸಿ ಎಐಸಿಸಿಟಿಯು ಪ್ರತಿಭಟನೆ
AICCTU protests demanding abolition of the contract labour system and implementation of direct wage
ಬೆಂಗಳೂರು 20: ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹಾಗೂ ಇತರ ಅಸ್ಥಿರ ಉದ್ಯೋಗ ಪದ್ಧತಿಗಳನ್ನು ರದ್ದುಪಡಿಸಿ, ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ನೇರ ವೇತನ ಪಾವತಿ ಜಾರಿಗೊಳಿಸಿ, ಪರಿಷ್ಕೃತ ಕನಿಷ್ಠ ವೇತನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ರಾಜ್ಯಮಟ್ಟದ ಪ್ರತಿಭಟನೆ ನಡೆಸಿತು. ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ’ರೋಜಾರಿಯೊ ಮಾತನಾಡಿ, ಕಾರ್ಖಾನೆಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಸಂಬಂಧಿಸಿದ ನಿರಂತರ ಕೆಲಸಗಳನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರಿಂದ ಮಾಡಿಸಲಾಗುತ್ತಿದೆ.
ಒಂದೇ ಸಂಸ್ಥೆಯಲ್ಲಿ 10ರಿಂದ 30 ವರ್ಷಗಳವರೆಗೆ ಸೇವೆ ಸಲ್ಲಿಸಿದರೂ ಹಲವು ಕಾರ್ಮಿಕರಿಗೆ ಖಾಯಂ ಉದ್ಯೋಗ, ಉದ್ಯೋಗ ಭದ್ರತೆ ಹಾಗೂ ಸಮರ್ಕ ಸಾಮಾಜಿಕ ಭದ್ರತೆ ದೊರೆಯುತ್ತಿಲ್ಲ ಎಂದು ಹೇಳಿದರು. ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರಿ ಕೃಷ್ಣನ್ ಮಾತನಾಡಿ, ಮೇ 22, 2026ರಂದು ಸರ್ಕಾರ ಅಧಿಸೂಚನೆಗೊಳಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ತಡೆಹಿಡಿಯದೆ ತಕ್ಷಣ ಜಾರಿಗೊಳಿಸಬೇಕು. ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಪಾವತಿಸುವ ಉದ್ಯೋಗದಾತರ ವಿರುದ್ಧ ಕಾರ್ಮಿಕ ಇಲಾಖೆ ತಕ್ಷಣ ತಪಾಸಣೆ ನಡೆಸಿ, ಬಾಕಿ ವೇತನವನ್ನು ವಸೂಲಿ ಮಾಡಿಸಬೇಕು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜೀವನ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಕನಿಷ್ಠ ವೇತನವನ್ನು ತಿಂಗಳಿಗೆ ಕನಿಷ್ಠ ರೂ42,000ಕ್ಕೆ ಪರಿಷ್ಕರಿಸಬೇಕು ಎಂದು ಸಂಘಟನೆ ಆಗ್ರಹಿಸಿತು.
ಇಎಸ್‌ಐ ವೇತನ ಮಿತಿ ಪರಿಷ್ಕರಣೆಗೆ ಆಗ್ರಹ: 2016ರಲ್ಲಿ ರೂ15,000ರಿಂದ ರೂ21,000ಕ್ಕೆ ಹೆಚ್ಚಿಸಲಾಗಿದ್ದ ಇಎಸ್‌ಐ ವೇತನ ಮಿತಿಯನ್ನು ಹಲವು ವರ್ಷಗಳಿಂದ ಪರಿಷ್ಕರಿಸಿಲ್ಲ. ಪ್ರಸ್ತುತ ಕೆಲವು ಅನುಸೂಚಿತ ಉದ್ಯೋಗಗಳಲ್ಲಿ ಕನಿಷ್ಠ ವೇತನವೇ ರೂ21,000ಕ್ಕಿಂತ ಹೆಚ್ಚಿರುವುದರಿಂದ ಅರ್ಹ ಕಾರ್ಮಿಕರು ಇಎಸ್‌ಐ ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಐಸಿಸಿಟಿಯು ತಿಳಿಸಿದೆ. ಕರ್ನಾಟಕ ಹೈಕೋರ್ಟ್ನ 18258 2026 ಪ್ರಕರಣದಲ್ಲಿ ಆ.4ರಂದು ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಇಎಸ್‌ಐ ವೇತನ ಮಿತಿಯನ್ನು ಪ್ರಸ್ತುತ ವೇತನ ಮಟ್ಟ ಹಾಗೂ ಜೀವನ ವೆಚ್ಚಕ್ಕೆ ಅನುಗುಣವಾಗಿ ಪರಿಷ್ಕರಿಸುವಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಅಪ್ಪಣ್ಣ, ನಿರ್ಮಲಾ, ನಾಗರಾಜ ಪೂಜಾರ್, ಮೋಹನ್, ರಾಮಣ್ಣ ವಿಟ್ಲ ಸೇರಿದಂತೆ ಹಲವು ಕಾರ್ಮಿಕ ಮುಖಂಡರು ಮಾತನಾಡಿದರು.
ಕೆ. ನಾಗಲಿಂಗಸ್ವಾಮಿ, ಅಜೀಜ್ ಜಾಗೀರ್ದಾರ್, ಕೇಶವ ನಾಯಕ್, ಅಶೋಕಗೌಡ, ಮಾಯಮ್ಮ, ಪರಶುರಾಮ, ಉಮಾ, ಭಾನುಪ್ರಕಾಶ್, ಬಸವರಾಜ ಎಂ., ಗೌರಿ, ಚಂದ್ರಶೇಖರ್ ಶಿರುಗುಪ್ಪಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಮಿಕರು ಭಾಗವಹಿಸಿದರು. ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿ ರದ್ದು, ನೇರ ವೇತನ ಪಾವತಿ, ಪರಿಷ್ಕೃತ ಕನಿಷ್ಠ ವೇತನದ ಕಟ್ಟುನಿಟ್ಟಿನ ಜಾರಿ, ಇಎಸ್‌ಐ ಸೌಲಭ್ಯ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆ, ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಕೆಲಸದ ವಾತಾವರಣ ಮತ್ತು ಕಾರ್ಮಿಕರ ಸಂಘಟನಾ ಹಕ್ಕುಗಳ ರಕ್ಷಣೆಗೆ ಸಂಘಟನೆ ಒತ್ತಾಯಿಸಿತು. ಬೇಡಿಕೆಗಳನ್ನು ರಾಜ್ಯ ಸರ್ಕಾರ ತುರ್ತಾಗಿ ಪರಿಗಣಿಸಿ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಐಸಿಸಿಟಿಯು ಎಚ್ಚರಿಕೆ ನೀಡಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 