ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ

ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ A historic decision by consensus of all three states to protect the interests of farmers

ಕೊಪ್ಪಳ 25: “ತುಂಗಭದ್ರಾ ನದಿ ಪಾತ್ರದ ರೈತರ ಹಿತರಕ್ಷಣೆಗೆ ಕರ್ನಾಟಕ, ಆಂಧ್ರ ಪ್ರದಶ ಹಾಗೂ ತೆಲಂಗಾಣ ಮೂರೂ ರಾಜ್ಯಗಳು ಸೇರಿ ಒಮ್ಮತದ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಕೊಪ್ಪಳ ಜಿಲ್ಲೆ ಮುನಿರಾಬಾದ್ ಸರಕಾರಿ ಹೈಸ್ಕೂಲ್ ಮೈದಾನದಲ್ಲಿ ತುಂಗಭದ್ರಾ ಅಣೆಕಟ್ಟೆಯ 33 ಸ್ಪಿಲ್ ವೇ ಗೇಟುಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಗುರುವಾರ ಮಾತನಾಡಿದರು.“ಇದು ದಕ್ಷಿಣ ಭಾರತದ ಐತಿಹಾಸಿಕ ಕಾರ್ಯಕ್ರಮ. 19ನೇ ಗೇಟ್ ತುಂಡರಿಸಿದಾಗ ಈ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದ ಶಿವರಾಜ್ ತಂಗಡಗಿ ಹಾಗೂ ಅಧಿಕಾರಿಗಳು ಮಧ್ಯರಾತ್ರಿ ನನಗೆ ಕರೆ ಮಾಡಿ, ಅಣೆಕಟ್ಟು ನಡುಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಾನು ಅಂದು ಬೆಳಗ್ಗೆ 8 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದೆವು.

ತಕ್ಷಣವೇ ಏನು ಮಾಡಬೇಕು ಎಂದು ತಜ್ಞರೊಂದಿಗೆ ಚರ್ಚಿಸಿ ಒಂದೇ ವಾರದಲ್ಲಿ ಗೇಟ್ ಬದಲಾವಣೆ ಮಾಡಲಾಯಿತು. ಆಮೂಲಕ ಈ ಭಾಗದ ರೈತರನ್ನು ರಕ್ಷಣೆ ಮಾಡಲಾಯಿತು” ಎಂದು ತಿಳಿಸಿದರು.“ಗೇಟ್ ತುಂಡರಿಸಿದಾಗ ವಿರೋಧ ಪಕ್ಷಗಳು ಟೀಕೆಗಳನ್ನು ಮಾಡಿದರು. ಶಾರದ ದೇವಿ, ಹುಲಿಗೆಮ್ಮ ಹಾಗೂ ಹುಚ್ಚರಾಯಸ್ವಾಮಿಯ ಆಶೀರ್ವಾದ, ಅಜ್ಜಯ್ಯ ಅವರ ಪವಾಡ, ಹಂಪಿ ವಿರೂಪಾಕ್ಷನ ಕೃಪೆ, ರಾಘವೇಂದ್ರ ಸ್ವಾಮಿಯ ಶಕ್ತಿಯಿಂದಾಗಿ ಇಂತಹ ಮಹತ್ವದ ಕಾರ್ಯಕ್ರಮ ಮಾಡಲು ಸಾಧ್ಯವಾಯಿತು. ನಮ್ಮ ಸರ್ಕಾರ 33 ಗೇಟ್ ಬದಲಾಯಿಸಲು ತೀರ್ಮಾನಿಸಿ ಈ ಮೂರು ರಾಜ್ಯಗಳ ರೈತರ ರಕ್ಷಣೆಗೆ ಭಗವಂತ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂದು ನಾನು ನೀರಾವರಿ ಸಚಿವನಾಗಿದ್ದೆ. ಇಂದು ಮುಖ್ಯಮಂತ್ರಿಯಾಗಿದ್ದೇನೆ. ಆದರೂ ನಾನು ನಿಮ್ಮ ಸೇವಕ ಹಾಗೂ ನಿಮ್ಮ ಬಂಧು” ಎಂದರು.

*ಮೂರು ರಾಜ್ಯಗಳು ಸೇರಿ ತುಂಗಭದ್ರಾ ಅಣೆಕಟ್ಟು ರಕ್ಷಣೆ*“ತುಂಗಭದ್ರಾ ಅಣೆಕಟ್ಟು ರಕ್ಷಣೆ ಮಾಡಲಾಗಿದೆ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂಬ ಮಾತಿದೆ. ಇಂದು ಸಿ.ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಚಂದ್ರಬಾಬು ನಾಯ್ಡು, ರೇವಂತ್ ರೆಡ್ಡಿ ಅವರು ಸೇರಿದಂತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಇತಿಹಾಸ ನಿರ್ಮಿಸಿದ್ದೇವೆ. ನಾವು ಇತಿಹಾಸ ಓದುವುದು ಹಾಗೂ ಸ್ಮರಿಸುವುದಕ್ಕಿಂತ ಇತಿಹಾಸ ಸೃಷ್ಟಿಸುವುದು ನಮ್ಮ ಗುರಿ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಹೇಳುತ್ತಿರುತ್ತೇನೆ. ಸಿ.ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟಾಗಿ ಸೇರಿ ಮೂರು ರಾಜ್ಯಗಳ ರಕ್ಷಣೆ ಮಾಡಿದ್ದೇವೆ” ಎಂದು ತಿಳಿಸಿದರು.