ಚಡಚಣದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಗುರು ನಮನ ಹಾಗೂ ಜೋಡೆತ್ತು ಕೃಷಿರೈತರ ಸನ್ಮಾನ ಕಾರ್ಯಕ್ರಮ: ಮೇ 28ರಂದು ಅದ್ದೂರಿ ಆಯೋಜನೆ

ಚಡಚಣದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಗುರು ನಮನ ಹಾಗೂ ಜೋಡೆತ್ತು ಕೃಷಿರೈತರ ಸನ್ಮಾನ ಕಾರ್ಯಕ್ರಮ: ಮೇ 28ರಂದು ಅದ್ದೂರಿ ಆಯೋಜನೆ A grand event to pay homage to Siddeshwara Swamiji and felicitation of farmers in Chadachana: Organi

ಲೋಕದರ್ಶನ ವರದಿ 

ಚಡಚಣ 23 : ಜ್ಞಾನಯೋಗಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ನೆನಪಿಗಾಗಿ ಚಡಚಣ ಪಟ್ಟಣದಲ್ಲಿ ಮೇ 28ರಂದು “ಗುರು ನಮನ” ಕಾರ್ಯಕ್ರಮ ಹಾಗೂ ಜೋಡೆತ್ತುಗಳನ್ನು ಸಾಕುತ್ತಿರುವ ಕೃಷಿಕ ರೈತರ ವಿಶೇಷ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹೇಂದ್ರಕುಮಾರ ನಾಯಕ ಪೌಂಡೇಶನ್ ಅಧ್ಯಕ್ಷ ಮಹೇಂದ್ರಕುಮಾರ ನಾಯಕ ತಿಳಿಸಿದ್ದಾರೆ. 

 ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುಕೃಪಾ ಮಂಗಲ ಕಾರ್ಯಾಲಯದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ಪರಮ ಪೂಜ್ಯ ಅದೃಷ್ಟ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು. 

“ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಚಡಚಣ ಪಟ್ಟಣದಲ್ಲಿ ಮೂರು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದ್ದರು. ಅವರ ಆಧ್ಯಾತ್ಮಿಕ ಮಾರ್ಗದರ್ಶನ, ಸಮಾಜಮುಖಿ ಚಿಂತನೆ ಹಾಗೂ ರೈತರ ಮೇಲಿನ ಅಪಾರ ಕಾಳಜಿಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ಯುವ ಮುಖಂಡ ಮಹೇಂದ್ರಕುಮಾರ ನಾಯಕ ತಿಳಿಸಿದರು. 

 ಸಾಧ್ವಿ ಯೋಗೇಶ್ವರಿ ಮಾತಾಜಿ ಬುರುಣಾಪುರ ಮಾತನಾಡಿ, ಸಾವಯವ ಕೃಷಿಗೆ ಮಹತ್ವ ನೀಡುತ್ತಿರುವ ಕಣೇರಿ ಸಿದ್ದಗಿರಿ ಮಠದ ಅದೃಷ್ಯ ಕಾಡಸಿದ್ದೇಶ್ವರ ಶ್ರೀಗಳ ದಿವ್ಯ ಸಾನಿಧ್ಯವಹಿಸಲಿದ್ದಾರೆ. ರೈತರ ನೋವು-ನಲಿವುಗಳಲ್ಲಿ ಭಾಗಿಯಾಗಿ ಕೃಷಿ ಜ್ಞಾನ ಹಾಗೂ ಸಂಸ್ಕೃತಿ ಬಗ್ಗೆ ಜನರಲ್ಲಿ ಜಾಗೃತಿ ಕಾರ್ಯಕ್ರಮ ಇದಾಗಿದ್ದು ಶ್ರೀಗಳ ಆಶಿರ್ವಚನದ ಲಾಭ ಪಡೆಯಬೇಕೆಂದು ಹೇಳಿದರು. 

 ಆಧುನಿಕ ಯುಗದಲ್ಲಿ ಟ್ರ್ಯಾಕ್ಟರ್, ಬುಲ್ಡೋಜರ್ ಹಾಗೂ ಯಾಂತ್ರಿಕ ಕೃಷಿ ಸಾಧನಗಳ ಬಳಕೆ ಹೆಚ್ಚಾಗುತ್ತಿರುವ ಕಾರಣ ಜೋಡೆತ್ತು ಸಾಕಾಣಿಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆ ರೈತರ ಪರಿಶ್ರಮ ಹಾಗೂ ಪರಂಪರೆಯ ಕೃಷಿ ಸಂಸ್ಕೃತಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಯೋಗಾನಂದ ಸ್ವಾಮೀಜಿ ಮಾತನಾಡಿದರು. 

ಪಟ್ಟಣದ ಹಿರಿಯರಾದ ಬಾಬುಗೌಡ ಪಾಟೀಲ್ ಮಾತನಾಡಿ, ಕಾರ್ಯಕ್ರಮದಲ್ಲಿ 101 ಜೋಡೆತ್ತು ಕೃಷಿಕ ರೈತರ ಸೇರಿಸುವ ಪ್ರಯತ್ನ ನಡೆಯುತ್ತಿದ್ದು, ತಾಲೂಕಿನ ಎಲ್ಲಾ ರೈತರು ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. 

 ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ ಮಾತನಾಡಿ, “ಇದು ಕೇವಲ ಒಂದು ಸಂಘಟನೆಯ ಕಾರ್ಯಕ್ರಮವಲ್ಲ, ತಾಲೂಕಿನ ಪ್ರತಿಯೊಬ್ಬರ ಕಾರ್ಯಕ್ರಮವಾಗಿದೆ. ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಗುವುದು” ಎಂದರು. 

 ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಯಂಕಂಚಿ, ಜಿಡಿ ಪಾವಲೆ, ಅಶೋಕ ಕುಲಕರ್ಣಿ, ದಶರಥ (ನಾನಾ) ಸಂಗಾ, ಮಹಾದೇವ ಯಂಕಂಚಿ, ರಾಜಶೇಖರ ಕೋಳಿ, ಪ್ರಕಾಶಗೌಡ ಪಾಟೀಲ, ಚೇತನ್ ನಿರಾಳೆ, ಅನಿಲ್ ಸಾಲುಂಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.