ಧಾರವಾಡ ಕೃಷಿ ವಿವಿಯಲ್ಲಿ 328 ಪ್ರಾಧ್ಯಾಪಕ ಹುದ್ದೆ ಖಾಲಿ

ಧಾರವಾಡ ಕೃಷಿ ವಿವಿಯಲ್ಲಿ 328 ಪ್ರಾಧ್ಯಾಪಕ ಹುದ್ದೆ ಖಾಲಿ  328 professor posts vacant at Dharwad Agricultural University


ಕಾರವಾರ  20 : ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳು ಹಾಗೂ ಬೋಧಕೇತರ ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ವರ್ಗದ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯ ಅನುಮೋದನೆಯ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ವಿಧಾನ ಪರಿಷತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.  

ವಿಧಾನ ಪರಿಷತ್ ಸದಸ್ಯ ಎಸ್‌.ವಿ. ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಶ್ವವಿದ್ಯಾಲಯದಲ್ಲಿ ಮಂಜೂರಾದ 595 ಪ್ರಾಧ್ಯಾಪಕ ಹುದ್ದೆಗಳ ಪೈಕಿ 328 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು. ಬೋಧಕೇತರ ‘ಎ’ ವರ್ಗದ 44 ಹುದ್ದೆಗಳಲ್ಲಿ 16, ‘ಬಿ’ ವರ್ಗದ 60ರಲ್ಲಿ 36, ‘ಸಿ’ ವರ್ಗದ 567ರಲ್ಲಿ 301 ಹಾಗೂ ‘ಡಿ’ ವರ್ಗದ 1,047 ಹುದ್ದೆಗಳಲ್ಲಿ 705 ಹುದ್ದೆಗಳು ಖಾಲಿ ಇವೆ ಎಂದರು.  

ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಗೃಹ ವಿಜ್ಞಾನ ಕಾಲೇಜಿನ ಶಿಥಿಲಗೊಂಡ ಕಟ್ಟಡದ ಕುರಿತು ಕೇಳಿದ ಪ್ರಶ್ನೆಗೆ, ವಿಶ್ವವಿದ್ಯಾಲಯದಿಂದ ಸ್ವೀಕರಿಸಿದ ಪ್ರಸ್ತಾವನೆಯನ್ನು ಪರೀಶೀಲಿಸಿ, ಆಂತರಿಕ ಸಂಪನ್ಮೂಲ ಅಥವಾ ಇತರ ಮೂಲಗಳಿಂದ ಅನುದಾನ ಪಡೆದು ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.