ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ 30 ದಿನಗಳ ಉಚಿತ ಟೈಲರಿಂಗ್ ತರಬೇತಿ
30-day free tailoring training for inmates at the central prison
ಲೋಕದರ್ಶನ ವರದಿ
ಬಳ್ಳಾರಿ, ಸೆ.23 (ಕರ್ನಾಟಕ ವಾರ್ತೆ): ನಗರದ ಕೇಂದ್ರ ಕಾರಾಗೃಹದ ಆವರಣದಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಆರ್ಸೆಟಿ) ಸಹಯೋಗದಲ್ಲಿ ಪುರುಷ ಬಂಧಿಗಳಿಗಾಗಿ ಆಯೋಜಿಸಿರುವ 30 ದಿನಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರ, ಇಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತೀವ್ರ ಪೈಪೋಟಿಯಿದ್ದು, ಬಂಧಿಗಳು ಆಸಕ್ತಿಯಿಂದ ಇಂತಹ ಕೌಶಲ್ಯ ತರಬೇತಿಗಳನ್ನು ಕಲಿತು ಸಮಾಜದ ಮುಖ್ಯವಾಹಿನಿಗೆ ಮರಳಬೇಕು. ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸುವ ಮೂಲಕ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು ಎಂದು ಕರೆ ನೀಡಿದರು.
ಕೇಂದ್ರ ಕಾರಾಗೃಹದ ಅಧೀಕ್ಷಕ ವಿ. ಕೃಷ್ಣಮೂರ್ತಿ ಮಾತನಾಡಿ, ಬಂಧಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡುವುದರಿಂದ ಅವರು ಸಮಾಜದ ಮುಖ್ಯವಾಹಿನಿಗೆ ಮರಳಲು ಸಾಧ್ಯವಾಗುತ್ತದೆ. ಶಿಕ್ಷೆ ಪೂರ್ಣಗೊಂಡು ಬಿಡುಗಡೆಯಾದ ಬಳಿಕ ಸ್ವಂತ ಉದ್ಯೋಗ ಕಂಡುಕೊಂಡು ಸ್ವಾವಲಂಬಿ ಹಾಗೂ ಗೌರವಯುತ ಜೀವನ ನಡೆಸಲು ಇಂತಹ ತರಬೇತಿಗಳು ಸಹಕಾರಿಯಾಗಲಿವೆ ಎಂದರು. ತರಬೇತಿ ಆಯೋಜಿಸಿದ ಕೆನರಾ ಬ್ಯಾಂಕ್ ಆರ್ಸೆಟಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಕೆನರಾ ಬ್ಯಾಂಕ್ ಜಿಲ್ಲಾ ಲೀಡ್ ವ್ಯವಸ್ಥಾಪಕ ಗೀರೀಶ್ ವಿ. ಕುಲಕರ್ಣಿ ಮಾತನಾಡಿ, ಸ್ವ-ಉದ್ಯೋಗ ಕೈಗೊಳ್ಳಲು ವಿವಿಧ ಬ್ಯಾಂಕ್ಗಳಲ್ಲಿ ದೊರೆಯುವ ಸಾಲ ಸೌಲಭ್ಯಗಳು ಹಾಗೂ ಆರ್ಥಿಕ ನೆರವಿನ ಕುರಿತು ಬಂಧಿಗಳಿಗೆ ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಬಿ. ಕೊಳೂರುಮಠ ಮಾತನಾಡಿ, ಟೈಲರಿಂಗ್ ತರಬೇತಿಯ ಜೊತೆಗೆ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ವೃದ್ಧಿ ಹಾಗೂ ಸಂವಹನ ಕೌಶಲ್ಯದ ತರಬೇತಿಯನ್ನೂ ನೀಡಲಾಗುವುದು. ಇದು ಬಂಧಿಗಳ ಮುಂದಿನ ವೃತ್ತಿ ಬದುಕಿಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕಾರಾಗೃಹದ ಸಹಾಯಕ ಅಧೀಕ್ಷಕ ಟಿ.ಬಿ. ಭಜಂತ್ರಿ, ಜೈಲರ್ ಪ್ರಕಾಶ್ ಶಿಂಧೆ, ಸಂಪನ್ಮೂಲ ವ್ಯಕ್ತಿ ಅಕ್ಬರ್ ಭಾಷಾ, ಉಪನ್ಯಾಸಕರಾದ ಜಡೆಪ್ಪ ಜಿ., ದಿನೇಶ್ ಕುಮಾರ್ ಜಿ., ಸಿಬ್ಬಂದಿ ಹಾಗೂ ತರಬೇತಿಯ 25 ಮಂದಿ ಶಿಬಿರಾರ್ಥಿ ಬಂಧಿಗಳು ಉಪಸ್ಥಿತರಿದ್ದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 