11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ 11th National Ayurveda Day Celebration

ಲೋಕದರ್ಶನ ವರದಿ

ಬೆಳಗಾವಿ  23 :  ಸಾವಿರಾರು ವರ್ಷಗಳ ಇತಿಹಾಸವಿರುವ ಆಯುರ್ವೇದವು ಸಮಗ್ರ ಆರೋಗ್ಯ ಹಾಗೂ ತಡೆಗಟ್ಟುವ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶದಲ್ಲಿ ಇಂದು ನಡೆಯುತ್ತಿರುವ ಆರೋಗ್ಯ ಕ್ಷೇತ್ರದ ರೂಪಾಂತರದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, 'ಆಯುಷ್ಮಾನ್ ಭಾರತ' ಹಾಗೂ 'ಸ್ವಸ್ಥ ಭಾರತ' ಯೋಜನೆಗಳ ಮೂಲಕ ಮನೆ ಮನೆಗೆ ಆರೋಗ್ಯ ಸೇವೆಗಳನ್ನು ತಲುಪಿಸಲಾಗುತ್ತಿದೆ ಎಂದು ಐಸಿಎಂಆರ್‌- ಎನ್‌ಐಟಿಎಂ ನಿರ್ದೇಶಕರಾದ ಡಾ. ಸುಬರ್ಣಾ ರಾಯ್ ತಿಳಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಬೆಳಗಾವಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಎನ್‌. ಐ. ಟಿ. ಎಂ-ಐ. ಸಿ. ಎಂ. ಆರ್‌. ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ(ಸೆ.23) ಶಿವಬಸವ ನಗರದ ಕೆಪಿಟಿಸಿಎಲ್ ಸಭಾಭವನದಲ್ಲಿ ಜರುಗಿದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಬದಲಾಗುತ್ತಿರುವ ಹವಾಮಾನ ಮತ್ತು ಜೀವನಶೈಲಿಗೆ ತಕ್ಕಂತೆ ಸಾಂಪ್ರದಾಯಿಕ ಓಷಧಗಳನ್ನು ಇಂದಿನ ಕಾಲಕ್ಕೆ ಸೂಕ್ತವಾಗಿ ಮೌಲ್ಯಮಾಪನ ಮಾಡುವುದು ಅತ್ಯಗತ್ಯವಾಗಿದೆ. ಜೈವಿಕ ತಂತ್ರಜ್ಞಾನ ಹಾಗೂ ಆಧುನಿಕ ವಿಜ್ಞಾನವನ್ನು ಬಳಸಿಕೊಂಡು ಆಯುರ್ವೇದ ಸಸ್ಯಗಳ ಸಕ್ರಿಯ ಘಟಕಗಳ ಪ್ರಭಾವವನ್ನು ಹೆಚ್ಚಿಸಲು ಮತ್ತು ಅವು ಸಾಕ್ಷ್ಯಾಧಾರಿತವಾಗಿವೆ ಎಂಬುದನ್ನು ಸಾಬೀತುಪಡಿಸಲು ನಿರಂತರ ಸಂಶೋಧನೆ ನಡೆಯುತ್ತಿದೆ ಎಂದರು.