ಮಕ್ಕಳ ಕಲಾ ಪ್ರತಿಭೆಗೆ ‘ಚಿಗುರು’ ಉತ್ತಮ ವೇದಿಕೆ: ರವಿ ಕೋಟಾರಗಸ್ತಿ
‘Chiguru’ is an excellent platform for children’s artistic talent: Ravi Kotaragasti
ಬೆಳಗಾವಿ 22: ಮಕ್ಕಳಲ್ಲಿ ಅಡಗಿರುವ ವಿಶಿಷ್ಟ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ‘ಚಿಗುರು’ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಹಿರಿಯ ಸಾಹಿತಿ ರವಿ ಕೋಟಾರಗಸ್ತಿ ಹೇಳಿದರು. ನಗರದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ಆಯೋಜಿಸಿದ್ದ ಒಂದು ದಿನದ ಮಕ್ಕಳ ಹಬ್ಬ ‘ಚಿಗುರು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ, ಅವರ ಕಲೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುವುದರೊಂದಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಹಕಾರಿಯಾಗುತ್ತವೆ ಎಂದರು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ‘ಚಿಗುರು’ ಕಾರ್ಯಕ್ರಮ ಆಯೋಜಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಎಚ್. ಭಜಂತ್ರಿ ಮಾತನಾಡಿ, ಸಾಹಿತ್ಯ ಮತ್ತು ಸಂಗೀತವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ. ಸಂಗೀತವು ಮಕ್ಕಳ ಮನಸ್ಸನ್ನು ಏಕಾಗ್ರತೆಯತ್ತ ಕೊಂಡೊಯ್ಯುವ ಶಕ್ತಿ ಹೊಂದಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವುದೇ ‘ಚಿಗುರು’ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಬೆಳಗಾವಿ ಲೇಖಕಿಯರ ಸಂಘದ ಅಧ್ಯಕ್ಷೆ ರಾಜನಂದಾ ಗಾರ್ಗಿ ಮಾತನಾಡಿ, ಸಮಾಜದ ಚಿಗುರುಗಳಾದ ಮಕ್ಕಳ ಜೀವನವನ್ನು ಬೆಳೆಸುವುದೇ ಕಾರ್ಯಕ್ರಮದ ಧ್ಯೇಯವಾಗಿದೆ. ಶಿಕ್ಷಣದ ಜತೆಗೆ ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಮಕ್ಕಳನ್ನು ತೊಡಗಿಸಬೇಕು. ಪ್ರತಿಯೊಬ್ಬ ಮಗುವಿನಲ್ಲೂ ತನ್ನದೇ ಆದ ಸಾಮರ್ಥ್ಯವಿದ್ದು, ಅದನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಅಗತ್ಯ ಎಂದರು.
ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಪರಮೇಶ್ವರ ಹೆಗಡೆ ಮಾತನಾಡಿ, ಚಿಗುರು ದೊಡ್ಡ ಮರವಲ್ಲದಿದ್ದರೂ ಅದೇ ಮರದ ಆರಂಭದ ಪ್ರಮುಖ ಹಂತವಾಗಿದೆ. ಮಕ್ಕಳ ಪ್ರತಿಭೆ ಗುರುತಿಸಲು ನಮ್ಮ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಉತ್ತಮ ಬೆಳೆಗೆ ಫಲವತ್ತಾದ ಭೂಮಿ ಬೇಕಾದಂತೆ, ಪ್ರತಿಭೆ ಅರಳಲು ‘ಚಿಗುರು’ ಉತ್ತಮ ವೇದಿಕೆಯಾಗಬೇಕು ಎಂದರು.
ನಂತರ ಅನಘಾ ಸುಂಟಕರ ಮತ್ತು ತಂಡದಿಂದ ವಾದ್ಯ ಸಂಗೀತ, ಆದಿತಿ ಎಂ. ಬೆಟಗೇರಿ ಅವರಿಂದ ವಚನ ಸಂಗೀತ, ವಿನಾಯಕ ಕಮ್ಮಾರ ಹಾಗೂ ಸಂಗಡಿಗರಿಂದ ಜನಪದ ಸಂಗೀತ, ರವಿ ನೃತ್ಯ ಕಲಾ ಮಂದಿರದ ಜೆ.ಎಸ್. ಸಿರಿ ಅವರಿಂದ ಸಮೂಹ ನೃತ್ಯ, ಬಿ.ಕೆ. ಮಾಡೆಲ್ ಪ್ರೌಢಶಾಲೆಯ ವಿದ್ಯಾರ್ಥಿ ಶುಕ್ಲಾಂಭರ ಪತ್ತಾರ ಅವರಿಂದ ಏಕಪಾತ್ರಾಭಿನಯ ಹಾಗೂ ರಾಮಗೌಡ ಪಾಟೀಲ ಮತ್ತು ತಂಡದಿಂದ ನಾಟಕ ಮತ್ತು ಸಮೂಹ ನೃತ್ಯ ಪ್ರದರ್ಶನ ನಡೆಯಿತು.
ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಭಿಮಪ್ಪ ಹುದ್ದಾರ, ಹಿರಿಯ ಕಲಾವಿದ ಪಂ. ರಾಜಪ್ರಭು ಧೋತ್ರೆ, ರವಿ ನೃತ್ಯ ಕಲಾ ಮಂದಿರದ ಗುರು ರವೀಂದ್ರ ಶರ್ಮಾ, ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸುಜಾತಾ ದಫ್ತರದಾರ, ಮಕ್ಕಳ ಪೋಷಕರು ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 