ಕರ್ನಾಟಕದ ಮೇಜರ್ ಸ್ವಾತಿ ಶಾಂತ ಕುಮಾರ್‌ಗೆ ವಿಶ್ವಸಂಸ್ಥೆ ಪ್ರಶಸ್ತಿ
United Nations Award to Major Swati Shanta Kumar of Karnataka
ಬೆಂಗಳೂರು: ಬೆಂಗಳೂರು ಮೂಲದ ಭಾರತೀಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತಕುಮಾರ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಡುವ ‘ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ–2025ಕ್ಕೆ ಭಾಜನರಾಗಿದ್ದಾರೆ.
ವಿವಿಧ ಕಾರ್ಯಾಚರಣೆಗಳಲ್ಲಿನ ಶ್ರೇಷ್ಠ ಸೇವೆಯನ್ನು ಗುರುತಿಸಿ ನೀಡುವ ಪ್ರಶಸ್ತಿಗಳನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಘೋಷಿಸಿದ್ದು, ಸಂಘರ್ಷ ಪೀಡಿತ ದಕ್ಷಿಣ ಸೂಡನ್ನಲ್ಲಿ ಮಹಿಳೆಯರ ರಕ್ಷಣೆ, ಸಮುದಾಯದ ನೆಮ್ಮದಿಗೆ ಕೈಗೊಂಡ ಸಂವೇದನಾಶೀಲ ಕ್ರಮಗಳಿಗಾಗಿ ಸ್ವಾತಿ ಅವರಿಗೆ ಪ್ರಶಸ್ತಿ ಒಲಿದಿದೆ. ‘ಸಮಾನ ಪಾಲುದಾರಿಕೆ–ಶಾಶ್ವತ ಶಾಂತಿ’ ಎನ್ನುವುದು ಅವರ ಧ್ಯೇಯವಾಗಿದ್ದು, ಶಾಂತಿ ರಕ್ಷಣಾ ಕಾರ್ಯಾಚರಣೆಗಳ ಮುಂದಾಳತ್ವದಲ್ಲಿ ಲಿಂಗ ಸಮಾನತೆಗೆ ಒತ್ತು ನೀಡಿದ್ದಾರೆ.
ವಿಶ್ವದಾದ್ಯಂತ ಇರುವ ಎಲ್ಲ ಶಾಂತಿ ರಕ್ಷಣಾ ಕಾರ್ಯಚರಣೆ ಹಾಗೂ ವಿಶ್ವ ಸಂಸ್ಥೆಗಳಿಂದ ಬಂದ ನಾಮನಿರ್ದೇಶನಗಳಲ್ಲಿ ಸ್ವಾತಿ ಆಯ್ಕೆಯಾಗಿದ್ದಾರೆ. ನಾಲ್ಕು ಅಂತಿಮ ಸ್ಪರ್ಧಿಗಳ ನಡುವೆ ನಡೆದ ಮತದಾನದಲ್ಲಿ ಅತ್ಯಧಿಕ ಮತಗಳನ್ನು ಪಡೆದು ಈ ಗೌರವಕ್ಕೆ ಪಾತ್ರವಾಗಿದ್ದಾರೆ.
‘ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ತಂಡವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸೇನೆಯಲ್ಲೂ ಲಿಂಗಸಮಾನತೆಯನ್ನು ಬಲಗೊಳಿಸಿದ್ದಾರೆ. ಕಾರ್ಯಾಚರಣೆ ವೇಳೆ ತಳಮಟ್ಟದ ಸಂವಹನ ಮತ್ತು ಸೇನೆಯ ನಂಟನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ. ಚುರುಕಾದ ವಾಯುಗಸ್ತುಗಳ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇದರಿಂದ ಸುಡಾನ್ನ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ. ಅವರು ಗಳಿಸಿದ ಸಮುದಾಯದ ವಿಶ್ವಾಸ ವಿಶ್ವಸಂಸ್ಥೆಯ ಮುಂದಿನ ಕೆಲಸಗಳಿಗೂ ಪ್ರೇರಣೆಯಾಗಿದೆ’ ಎಂದು ಗುಟೆರೆಸ್ ಶ್ಲಾಘಿಸಿದ್ದಾರೆ.
ಎಂಜಿನಿಯರಿಂಗ್ ಪದವೀಧರೆ ಸ್ವಾತಿ ಅವರು ಬೆಂಗಳೂರಿನ ಲಿಂಗರಾಜಪುರದ ಖಾಸಗಿ ಕಂಪನಿ ಉದ್ಯೋಗಿ ಶಾಂತಕುಮಾರ್, ಸರ್ಕಾರಿ ಶಾಲಾ ಶಿಕ್ಷಕಿ ರಾಜಮಣಿ ದಂಪತಿ ಪುತ್ರಿ. ಎಂಟು ವರ್ಷಗಳಿಂದ ಭಾರತೀಯ ಸೇನೆಯಲ್ಲಿದ್ದು, ಒಂದೂವರೆ ವರ್ಷದಿಂದ ದಕ್ಷಿಣ ಸೂಡನ್ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸೇವಾನಿರತರಾಗಿದ್ದಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 