ಜೈನ ಸಮಾಜದ ಸಂಸ್ಕೃತಿ, ಅಹಿಂಸಾ ತತ್ವಗಳನ್ನು ಜಗತ್ತಿಗೆ ಸಾರಿದ ಕೀರ್ತಿ ವಿದ್ಯಾನಂದ ಮುನಿಗಳಿಗೆ ಸಲ್ಲುತ್ತದೆ: ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ
ಕಾಗವಾಡ, 18 : ಜೈನ ಸಮಾಜವು ಇಡೀ ವಿಶ್ವದಲ್ಲಿಯೇ ಅಹಿಂಸಾ ತತ್ವ-ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದಿರುವ ಸಮಾಜವಾಗಿದ್ದು, 21ನೇ ಶತಮಾನದ ರಾಷ್ಟ್ರಸಂತ ವಿದ್ಯಾನಂದ ಮುನಿಮಹಾರಾಜರು ಜೈನ ಸಂಸ್ಕೃತಿ, ಅಹಿಂಸಾ ಧರ್ಮವನ್ನು ವಿಶ್ವವ್ಯಾಪಿ ಪಸರಿಸಿದವರು. ದಕ್ಷಿಣ ಭಾರತದ ಜೈನ ತಿರ್ಥ ಕ್ಷೇತ್ರವಾದ ಶ್ರವಣಬೆಳಗೊಳವನ್ನು ವಿಶ್ವ ಭೂಪಟದಲ್ಲಿ ಬಿಂಬಿಸಿದ ಶ್ರೇಯ ಅವರದ್ದಾಗಿದೆಯೆಂದು ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಹೇಳಿದರು.
ಅವರು, ರವಿವಾರ ದಿ. 18 ರಂದು ತಾಲೂಕಿನ ಶೇಡಬಾಳ ಪಟ್ಟಣದ ವಿದ್ಯಾನಂದ ಮುನಿರಾಜ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಷ್ಟ್ರಸಂತ ವಿದ್ಯಾನಂದ ಮುನಿರಾಜರ ಜನ್ಮ ಶತಾಬ್ದಿ ಮಹೋತ್ಸವದ ವರ್ಷಾಚರಣೆ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು.
ವಿಜಯಪೂರ ಜ್ಞಾನಯೋಗ ಆಶ್ರಮದ ಜ್ಞಾನಾನಂದ ಸ್ವಾಮೀಜಿ ಮಾತನಾಡಿ, ವಿದ್ಯಾನಂದ ಮಹಾರಾಜರ ಬಾಲ್ಯದಿಂದ ಸಮಾಧಿ ವರೆಗಿನ ವಿಸ್ತೃತವಾದ ಮಾಹಿತಿಯನ್ನು ನೀಡಿ ಮಹಾರಾಜರು ವಿಶ್ವಕ್ಕೆ ನೀಡಿರುವ ಕೊಡುಗೆ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ ಭಾಗವಹಿಸಿ, ಮಾತನಾಡುತ್ತ, ಪ.ಪೂ. ವಿದ್ಯಾನಂದ ಮುನಿರಾಜರು ಶೇಡಬಾಳದ ಸುಪುತ್ರರು, ಕೇಂದ್ರ ಸರ್ಕಾರ ಅವರ ಸ್ಮರಣಾರ್ಥವಾಗಿ ಶೇಡಬಾಳದ ರೈಲು ನಿಲ್ದಾಣಕ್ಕೆ ವಿದ್ಯಾನಂದ ಮುನಿರಾಜ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಈ ನಿಟ್ಟಿನಲ್ಲಿ ತಾವು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಜೈನ ಅಸೋಶಿಯೆಶನ್‌ನ ಉಪಾಧ್ಯಕ್ಷ ಶಿತಲಗೌಡ ಪಾಟೀಲ, ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಯೋಜಕ ಪ್ರಕಾಶ ನಾಂದ್ರೆ, ಡಾ. ಅಶೋಕ ಪಾಟೀಲ, ಡಾ. ಮಹಾದವಲ ಭೋಮಾಜ, ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ, ಹಿರಿಯ ಸಾಹಿತಿ ಬಾಹುಬಲಿ ಭೋಸಗೆ, ರವೀಂದ್ರ ನರಸಾಯಿ ಸೇರಿದಂತೆ ವಿದ್ಯಾನಂದ ಮಹಾರಾಜರ ಜೈನ ಹಾಗೂ ಜೈನೆತರ ಭಕ್ತರು ಉಪಸ್ಥಿತರಿದ್ದರು. ಜೈನ ಸಮಾಜದ ಶಾಸ್ತ್ರಿ ಡಾ.ರಾಜೇಂದ್ರ ಸಾಂಗಾವೆ, ಗುರುಮಾತೆ ಅರ್ಚನಾ ಪಾಟೀಲ ನಿರೂಪಿಸಿದರು.