ಬಸ್ ನಿಲುಗಡೆಗೆ ಒತ್ತಾಯಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ
ತಾಳಿಕೋಟೆ, 18 : ತಾಲ್ಲೂಕಿನ ಮಠಕಲ್ಲದೇವನಹಳ್ಳಿ(ಬಂಡೆಪ್ಪನಹಳ್ಳಿ) ಮತ್ತು ಬಂಡೆಪ್ಪನಹಳ್ಳಿ ಸಾಲವಾಡಗಿ ಗ್ರಾಮಗಳನ್ನು ಬಸ್ ನಿಲುಗಡೆಗೆ ಒಂದೇ ಗ್ರಾಮದ ಎರಡು ನಿಲುಗಡೆ ಸ್ಥಳಗಳನ್ನಾಗಿ ಪರಿಗಣಿಸಿ ಎಲ್ಲ ಪ್ರಕಾರದ ಬಸ್ ಗಳನ್ನು ಇವೆರಡೂ ಗ್ರಾಮಗಳಲ್ಲಿ ನಿಲುಗಡೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಕಲಬುರಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಶನಿವಾರ ಮನವಿ ಸಲ್ಲಿಸಿದರು. ಮಠಕಲ್ಲದೇವನಹಳ್ಳಿ(ಬಂಡೆಪ್ಪನಹಳ್ಳಿ)ಯು ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣವಾಗಿದೆ. ಪ್ರತಿದಿನ ಬಂಡಿಸ್ವಾಮಿ, ನಿಂಗಯ್ಯಮುತ್ಯಾ ಹಾಗೂ ಕೊಳ್ಳದ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ನೂರಾರು ಭಕ್ತರು ಭೇಟಿ ನೀಡುತ್ತಾರೆ.
ತಾಳಿಕೋಟೆ ಮತ್ತು ಹುಣಸಗಿ ತಾಲ್ಲೂಕು ಕೇಂದ್ರಗಳ ಮಧ್ಯದಲ್ಲಿ 12 ಕಿಮೀ ಅಂತರದಲ್ಲಿರುವುದರಿಂದ ಕೃಷಿ, ಶಿಕ್ಷಣ, ವ್ಯಾಪಾರ, ಉದ್ಯೋಗ, ಆಸ್ಪತ್ರೆ, ಕೂಲಿ ಕೆಲಸಗಳಿಗೆಂದು ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಪ್ರತಿದಿನ ಬಹುಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಆದರೆ ದುರದೃಷ್ಟವಶಾತ್ ಗ್ರಾಮದಲ್ಲಿ ವೇಗದೂತ ಬಸ್ ನಿಲುಗಡೆಯಿಲ್ಲ. ಇದರಿಂದಾಗಿ ಗ್ರಾಮದ ಜನತೆ, ವೃದ್ಧರು, ಮಹಿಳೆಯರು, ರೋಗಿಗಳು ವಿದ್ಯಾರ್ಥಿಗಳು, ಯುವಕರು ಯಾತ್ರಾರ್ಥಿಗಳು ನಿತ್ಯ ಒಂದು ಕಿ.ಮೀನಷ್ಟು ನಡೆದುಕೊಂಡೇ ಹೋಗಬೇಕಾಗಿ ಬಂದಿದೆ. ಅವರೆಲ್ಲರಿಗೂ ಅನುಕೂಲವಾಗುವಂತೆ ಸಾರಿಗೆ ಘಟಕದ ಎಲ್ಲ ಬಸ್ಗಳು ಇಲ್ಲಿ ನಿಲುಗಡೆಯಾಗುವಂತೆ ಕ್ರಮವಹಿಸಬೇಕು. ಒಂದು ಕಿ.ಮೀ. ಪರಸ್ಪರ ದೂರದಲ್ಲಿರುವ ಬ.ಸಾಲವಾಡಗಿ ಮತ್ತು ಮಠಕಲ್ಲದೇವನಹಳ್ಳಿಗಳನ್ನು ಒಂದೇ ಗ್ರಾಮದ ಎರಡು ನಿಲುಗಡೆಯೆಂದು ಪರಿಗಣಿಸಿ ಎಲ್ಲ ಪ್ರಕಾರದ ಸಾರಿಗೆ ವಾಹನಗಳು ನಿಲ್ಲುವಂತಾಗಬೇಕು. ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಈ ಹಿಂದೆ ತಾಳಿಕೋಟೆ ಸಾರಿಗೆ ಘಟಕ ವ್ಯವಸ್ಥಾಪಕರಿಗೆ 9.11.2024 ರಂದು ಮನವಿ ನೀಡಲಾಗಿತ್ತು. ವರ್ಷದ ಹಿಂದೆ ಗುಲಬರ್ಗಾ ಡಿಪೋದವರಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ ಇಂದಿನವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಬಸ ದರ ಮತ್ತು ನಿಲುಗಡೆ ಸಂಬಂಧಿಸಿದ ಬೇಡಿಕೆ ಈಡೇರಿದರೆ ನಿತ್ಯ ನೂರಾರು ಜನತೆಗೆ ಅನುಕೂಲ ಮಾಡಿದಂತಾಗುತ್ತದೆ. ಕ್ರಮವಹಿಸದಿದ್ದಲ್ಲಿ ಮುಂದೆ ಉಂಟಾಗಬಹುದಾದ ಅನಾಹುತಗಳಿಗೆ ಸಂಬಂಧಿತ ಅಧಿಕಾರಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ಗ್ರಾಮಸ್ಥರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಶರಣು ಬಂಡೆಪ್ಪನಹಳ್ಳಿ, ಕಿರಣ್ ಬಡಿಗೇರ, ಲಕ್ಷ್ಮಣ ಎಚ್.ಬಿ. ಸಿದ್ದಣ್ಣಾ ಜಿ, ಸಂತೋಷ, ಜಗದೀಶ, ಲಕ್ಷ್ಮೀಬಾಯಿ, ಶಂಕ್ರಮ್ಮಾ, ದೇವಮ್ಮ, ಯಲ್ಲಮ್ಮ, ಕಾವ್ಯಾ ಇತರರು ಇದ್ದರು.