ಈ-ಸ್ವತ್ತು ಉತಾರ ನೀಡುವಲ್ಲಿ ವಿಳಂಬ ಧೋರಣೆ ಖಂಡಿಸಿ ಪ್ರತಿಭಟನೆ
ಘಟಪ್ರಭಾ 06: ಪುರಸಭೆ ವ್ಯಾಪ್ತಿಯ ಈ-ಸ್ವತ್ತು ಉತಾರಗಳನ್ನು ನೀಡುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವದನ್ನು ಸರಿಪಡಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗೋಕಾಕ ತಾಲೂಕಾ ಘಟಕದ ಮುಖಂಡರು ಹಾಗೂ ಪದಾಧಿಕಾರಿಗಳು, ಪ್ರತಿಭಟಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸೋಮವಾರ ಮುಂಜಾನೆ ಪ್ರತಿಭಟನೆ ಮೂಲಕ ಪುರಸಭೆ ಕಾರ್ಯಾಲಯಕ್ಕೆ ಆಗಮಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಈಗಾಗಲೆ ಈ ಸ್ವತ್ತು ಉತಾರಗಳನ್ನು ನೀಡುವ ಕಾರ್ಯ ಚಾಲ್ತಿಯಲ್ಲಿದ್ದು, ಕಾರಣ ನೂರಾರು ಜನರು ತಮ್ಮ ಆಸ್ತಿಗಳಿಗಾಗಿ ಇ-ಸ್ವತ್ತು ಉತಾರಗಳಿಗಾಗಿ ಘಟಪ್ರಭಾ ಪುರಸಭೆ ಕಾರ್ಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿಗಳನ್ನು ಸಲ್ಲಿಸಿ ತಿಂಗಳು ಗಟ್ಟಲೆ ಕಾಲ ಕಳೆದರೂ ಸಹ ಪುರಸಭೆ ಅಧಿಕಾರಿಗಳು ಅರ್ಜಿದಾರರಿಗೆ ಉತಾರಗಳನ್ನು ಪೂರೈಸದೇ ಸತಾಯಿಸುತ್ತಿದ್ದಾರೆ. ಇಲ್ಲ ಸಲ್ಲದ ನಿಯಮಗಳನ್ನು ಹೇಳಿ ಸಾರ್ವಜನಿಕರು ಪುರಸಭೆ ಕಾರ್ಯಾಲಯಕ್ಕೆ ಅಲೇದಾಡುವಂತೆ ಮಾಡುತ್ತಿದ್ದಾರೆ. ಘಟಪ್ರಭಾ ಪುರಸಭೆ ವ್ಯಾಪ್ತಿಯಲ್ಲಿ ಅನೇಕರು ನಾನ್ ಎನ್-ಎ (ಭೂ-ಪರಿವರ್ಥನೆ) ಜಮೀನುಗಳಲ್ಲಿ ವಾಸಕ್ಕಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಸದರಿ ಮನೆ ಹಾಗೂ ಖುಲ್ಲಾ ಜಾಗಗಳು ಗ್ರಾಮ ಪಂಚಾಯತಿ ಇದ್ದಾಗನಿಂದ ತಮ್ಮ ಆಸ್ತಿ ರಜಿಸ್ಟಾರನಲ್ಲಿ ದಾಖಲಾಗಿ ಉತಾರಗಳನ್ನು ಪೂರೈಸಲಾಗುತ್ತಿದ್ದು, ಹತ್ತಾರು ವರ್ಷಗಳಿಂದ ಆಸ್ತೆ ತೆರಿಗೆಯನ್ನು ಭರಿಸಿಕೊಳ್ಳುತ್ತ ಬಂದಿರುತ್ತಾರೆ. ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ಕಾಯ್ದೆ, 2024ರ ನಿಯಮ (1ಬಿ) () ಪ್ರಕಾರ ಕಟ್ಟಡ ಉಪ ವಿಧಿಗಳು ಉಪ ಬಂಧನಗಳನ್ನು ಉಲ್ಲಂಘಿಸಿ ಕಟ್ಟಿರುವ ಅಥವಾ ಅನಧಿಕೃತ ಲೇಓಟ್‌ನಲ್ಲಿ ಅಥವಾ ರೆವಿನ್ಯೂ ಭೂಮಿಯಲ್ಲಿ ಕಟ್ಟಿರುವ ಕಟ್ಟಡವು ಸೇರಿದಂತೆ ಪ್ರತಿಯೊಂದು ಕಟ್ಟಡಕ್ಕೆ ಖಾಲಿ ಭೂಮಿಗೆ ಅಥವಾ ಅವೆರಡನ್ನೂ ಒಳಗೊಂಡು ಅಥವಾ ಈ ಉಪಬಂಧದ ಪ್ರಾರಂಭದ ದಿನಾಂಕಕ್ಕೂ ಮೊದಲು ಸೃಜಿಸಿದ ಸ್ವತ್ತಿಗಾಗಿ ಮಾತ್ರ ಅಧಿಭೋಗ ಪ್ರಮಾಣ ಪತ್ರ ಅಥವಾ ಕಟ್ಟಡ ನಿರ್ಮಾಣ ಮುಕ್ತಾಯ ಪ್ರಮಾಣಪತ್ರವನ್ನು ನೀಡದೆಯೇ ವಾಸಕ್ಕೆ ಬಳಸುತ್ತಿರುವ ಕಟ್ಟಡಕ್ಕೆ ಮೊದಲ ವರ್ಷಕ್ಕಾಗಿ ಎರಡು ಪಟ್ಟು ಸ್ವತ್ತು ತೆರಿಗೆಯನ್ನು ವಿಧಿಸಿ ಉತಾರಗಳನ್ನು ಪೂರೈಸಬೇಕೆಂದು ಹೇಳುತ್ತದೆ. ಅಲ್ಲದೇ ಸರ್ಕಾರದ ಮಾರ್ಗಸೂಚಿ ಪ್ರಕಾರ ಇದಕ್ಕೆ ನಿಗದಿತ ಕಾಲಾವಕಾಶವಿದ್ದು ಅಧಿಕಾರಿಗಳು ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳ ವಿಲೆವಾರಿಗೆ ವಿಳಂಭ ನೀತಿ ಅನುಸರಿಸಿದರೆ ಸಾವಿರಾರು ಜನರು ಇದರಿಂದ ತೊಂದರೆ ಅನುಭವಿಸಬೆಕಾಗುತ್ತದೆ. ಅನಧೀಕೃತ ಬಡಾವಣೆ ಅಥವಾ ಕಂದಾಯ ಭೂಮಿಯಲ್ಲಿ ನಿರ್ಮಿಸಿರುವ ಮನೆಗೆಳ ಉತಾರಗಳ ಪೂರೈಸುವ ಸರ್ಕಾರದ ಗಡುವು ಮುಕ್ತಾಯದ ಹಂತದಲ್ಲಿದ್ದು, ಘಟಪ್ರಭಾ ಪುರಸಭೆಯಲ್ಲಿ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಆದ್ದರಿಂದ ಮುಖ್ಯಾಧಿಕಾರಿಗಳು ತಮ್ಮ ಪುರಸಭೆ ಆಸ್ತಿ ರಜಿಸ್ಟರ್‌ದಲ್ಲಿ ಆಸ್ತಿಗಳು ದಾಖಲು ಇರುವ ಪ್ರಕಾರ ಉತಾರಗಳನ್ನು ಪೂರೈಸುವ ಕಾರ್ಯ ಮಾಡಬೇಕು. ಮತ್ತು ಒಂದು ವರ್ಷಗಳ ಹಿಂದೆ ಸಲ್ಲಿಸಿರುವ ಅರ್ಜಿಗಳು ಕೂಡಾ ವಿಲೇವಾರಿ ಆಗಿಲ್ಲ. ನಿಯಮಾವಳಿಗಳಲ್ಲಿ ಉತಾರಗಳನ್ನು ಪೂರೈಸಲು ಅವಕಾಶ ಇದ್ದರೂ ಸಹ ಘಟಪ್ರಭಾ ಪುರಸಭೆಯಲ್ಲಿ ಬಡ ಜನರಿಗೆ ಇ-ಸ್ವತ್ತು ಉತಾರಗಳನ್ನು ಪೂರೈಸದೇ ಕಾಲಹರಣ ಮಾಡುತ್ತಿರುವ ಕಂದಾಯ ವಿಭಾಗದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಜನರಿಗೆ ಉತಾರಗಳನ್ನು ಪೂರೈಸುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕೆಂಬುದು ಮನವಿಯಲ್ಲಿ ಆಗ್ರಹಿಸಿಲಾಗಿದೆ. ಮನವಿಗೆ ಸ್ಪಂದಿಸಿ 20 ದಿನಗಳ ಒಳಗಾಗಿ ಸಾರ್ವಜನಿಕರ ಇ-ಸ್ವತ್ತು ಉತಾರಗಳ ಸಮಸ್ಯೆಯನ್ನು ಬಗೆಹರಿಸದೇ ಹೋದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗೋಕಾಕ ತಾಲೂಕಾ ಘಟಕದ ವತಿಯಿಂದ ಪುರಸಭೆ ಕಾರ್ಯಾಲಯ ಘಟಪ್ರಭಾ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ವಾಗುತ್ತದೆ ಎಂದು ಎಚ್ಚರಿಸಲಾಗಿದೆ. ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ, ಕರವೇ ಸಂತೋಷ ಅರಳಿಕಟ್ಟಿ ಬಣದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ, ಕನ್ನಡ ಸೇನೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಕೆಂಪಯ್ಯ ಪುರಾಣಿಕ, ಕನ್ನಡ ಸೇನೆ ಗೋಕಾಕ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಮಹಾಜನ, ಕನ್ನಡ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಚೌಕಶಿ, ಮೂಡಲಗಿ ತಾಲೂಕಾಧ್ಯಕ್ಷ ರಾಘವೇಂದ್ರ ಕುಡ್ಡೆಮ್ಮಿ, ಮಲ್ಲಿಕಾರ್ಜುನ ಅರಭಾವಿ, ಶಶಿಧರ ಚೌಕಶಿ, ರಾಜಕುಮಾರ ಹೊನಕೇರಿ, ನಾಗರಾಜ ಶಹಾಪುರ, ಶಿವರಾಜ ಚಿಗಡೊಳಿ, ನಾರಾಯಣ ಜಡಕಿನ, ವಿಠ್ಠಲ ಬೆಳಗಲಿ, ಕಾಶಪ್ಪ ನಿಂಗನ್ನವರ, ಮಲ್ಲಿಕಾರ್ಜುನ ಶಿಂಧೆ, ಬಸವರಾಜ ಹುಬ್ಬಳ್ಳಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.