ನಾಡಗೌಡರು ಅಸಮರ್ಥ ನಾಯಕ: ನಡಹಳ್ಳಿಬರಗಾಲ ಘೋಷಣೆಗೆ ಆಗ್ರಹಿಸಿ ಸತ್ಯಾಗ್ರಹ

ನಾಡಗೌಡರು ಅಸಮರ್ಥ ನಾಯಕ: ನಡಹಳ್ಳಿಬರಗಾಲ ಘೋಷಣೆಗೆ ಆಗ್ರಹಿಸಿ ಸತ್ಯಾಗ್ರಹ Nadagouda is an Incompetent Leader: Nadahalli Stages Satyagraha Demanding Declaration of Drought

ಲೋಕದರ್ಶನ ವರದಿ 

ಮುದ್ದೇಬಿಹಾಳ  07: ತಮ್ಮದೇ ಪಕ್ಷದ ಆಡಳಿತ ರಾಜ್ಯದಲ್ಲಿದ್ದರೂ ಸ್ಥಳೀಯ ಶಾಸಕ ಸಿ.ಎಸ್‌. ನಾಡಗೌಡರು ಅಸಮರ್ಥ ನಾಯಕರಾಗಿದ್ದಾರೆ. ನಿಜವಾದ ರೈತಪರ ಕಾಳಜಿ ಇದ್ದರೆ ಇವತ್ತೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳನ್ನು ಭೇಟಿಯಾಗಿ ಮುದ್ದೇಬಿಹಾಳ ತಾಲೂಕು ಸೇರಿದಂತೆ ವಿಜಯಪುರ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಲಿ ಎಂದು ಮಾಜಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಸವಾಲು ಹಾಕಿದರು. 

ಮುದ್ದೇಬಿಹಾಳ ತಾಲೂಕು ಸೇರಿದಂತೆ ಸಂಪೂರ್ಣ ವಿಜಯಪುರ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸತ್ಯಾಗ್ರಹ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಶಾಸಕ ನಾಡಗೌಡರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ರೈತರ ಮೇಲಿನ ಕಾಳಜಿಯಿಂದಲ್ಲ ಎಂದು ಆರೋಪಿಸಿದ ನಡಹಳ್ಳಿ, ನಾಡಗೌಡ ಅವರ ನಿಗಮವೂ ಜಿಲ್ಲಾ ಉಸ್ತುವಾರಿ ಸಚಿವರ ವ್ಯಾಪ್ತಿಯಲ್ಲಿದೆ. ನಿಗಮದಿಂದ ಶಾಸಕರಿಗೆ ನೀಡಲಾಗಿದ್ದ ಸರ್ಕಾರಿ ಕಾರು ಹಾಗೂ ನಿಗಮದ ಅಧ್ಯಕ್ಷ ಸ್ಥಾನವನ್ನು ಹಿಂಪಡೆಯಲಾಗಿರುವುದರಿಂದಲೇ ಅವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಟುವಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು. 

ಎಂ.ಬಿ. ಪಾಟೀಲರು ಹಾಗೂ ನಾಡಗೌಡರು ಇಬ್ಬರೂ ಒಂದೇ. ಜನರ ಮುಂದೆ ಮಾತ್ರ ಭಿನ್ನಾಭಿಪ್ರಾಯವಿರುವಂತೆ ನಾಟಕವಾಡುತ್ತಿದ್ದಾರೆ. ಆದರೆ ಜನರು ಹುಚ್ಚರಲ್ಲ; ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದನ್ನು ಇಬ್ಬರೂ ಅರಿತುಕೊಳ್ಳಬೇಕು ಎಂದು ನಡಹಳ್ಳಿ ಎಚ್ಚರಿಸಿದರು. ರೈತರ ಬೆಳೆಗಳು ಮಳೆಯ ಕೊರತೆಯಿಂದ ಹಾನಿಗೊಳಗಾಗಿದ್ದು, ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಮುದ್ದೇಬಿಹಾಳ ಸೇರಿದಂತೆ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.