ರಾಸಾಯನಿಕ ಬಳಕೆಯಿಂದ ಭೂಮಿ ಬಂಜರು

ರಾಸಾಯನಿಕ ಬಳಕೆಯಿಂದ ಭೂಮಿ ಬಂಜರು  Land becomes barren due to the use of chemicals


ಹೂವಿನಹಡಗಲಿ, ಸೆ. 10: ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ಅತಿಯಾಗಿ ರಾಸಾಯನಿಕ ಓಷಧ ಬಳಸುತ್ತಿರುವುದರಿಂದ ಫಲವತ್ತಾದ ಭೂಮಿ ತನ್ನ ಸತ್ವ ಕಳೆದುಕೊಂಡು ಬಂಜರಾಗುವ ಅಪಾಯವಿದೆ ಎಂದು ಬೇಸಾಯ ತಜ್ಞ ಹಾಗೂ ಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಚಂದ್ರಕಾಂತ ಎಂ. ಕಾಲಿಬಾವಿ ಕಳವಳ ವ್ಯಕ್ತಪಡಿಸಿದರು.  

ತಾಲೂಕಿನ ಹೊಳಲು ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಗುರುವಾರ ಕಸಾಪ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೃಷಿ ವಿಜ್ಞಾನ’ ಕುರಿತು ಅವರು ಮಾತನಾಡಿದರು.  

ಹವಾಮಾನ ವೈಪರೀತ್ಯದಿಂದ ವಿವಿಧ ಬೆಳೆಗಳಲ್ಲಿ ಕೀಟಬಾಧೆ ಹೆಚ್ಚಾಗಿದ್ದು, ರೈತರು ಇಳುವರಿ ಹೆಚ್ಚಿಸಲು ರಾಸಾಯನಿಕ ಓಷಧಿಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದು, ರೈತರಿಗೆ ನೀರೀಕ್ಷಿತ ಆದಾಯ ದೊರೆಯುತ್ತಿಲ್ಲ. ಸಿರಿಧಾನ್ಯಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಅವರು ಸಲಹೆ ನೀಡಿದರು.  

ನಿವೃತ್ತ ಕೃಷಿ ಅಧಿಕಾರಿ ಹಾಗೂ ದತ್ತಿದಾನಿ ಟಿ.ಕೆ. ಬ್ಯಾಡಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಏಕಬೆಳೆ ಪದ್ಧತಿ ಬದಲಿಗೆ ಆಹಾರ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಮಗ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಜತೆಗೆ ಹೈನುಗಾರಿಕೆ, ಮೀನುಗಾರಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ ಕೈಗೊಂಡರೆ ಕೃಷಿಯಲ್ಲಿನ ಏರಿಳಿತಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದರು.  

ಉಪನ್ಯಾಸಕ ಬಿ.ಎಚ್‌. ಪ್ರಶಾಂತ್ ಕುಮಾರ್ ಮಾತನಾಡಿದರು. ಕಸಾಪ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರೇಹಡಗಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಜಿ.ಎಸ್‌. ಸತೀಶ್ ಅಧ್ಯಕ್ಷತೆ ವಹಿಸಿದ್ದರು.  

ಕಾರ್ಯಕ್ರಮದಲ್ಲಿ ಬೂದನೂರು ಚಂದ್ರೇಗೌಡ ಸ್ಮಾರಕ ದತ್ತಿ, ಪೂಜಾರ ಬಸವರಾಜಪ್ಪ ದೇವೇಂದ್ರ​‍್ಪ ದತ್ತಿ, ಗಡ್ಡಿ ಸಾವಿತ್ರಮ್ಮ-ಶ್ರೀಗಡ್ಡಿ ಬಸಪ್ಪ ಸ್ಮರಣಾರ್ಥ ದತ್ತಿ ಹಾಗೂ ಭ್ರಮರಿಬಾಯಿ ಪಾರಸಮಲ್ ಮೆಹತಾ ಸ್ಮಾರಕ ದತ್ತಿ ಉಪನ್ಯಾಸಗಳು ನಡೆದವು.ಉಪನ್ಯಾಸಕ ಪ್ರಹ್ಲಾದ್ ವಂದಿಸಿದರು. ಉಪನ್ಯಾಸಕಿ ಶಾಕಾರದ ಸುಮಾ ಕಾರ್ಯಕ್ರಮ ನಿರ್ವಹಿಸಿದರು.