ಬೋರವೆಲ್ ಒಣಗಿ ಕುಡಿಯುವ ನೀರಿನ ತೀವ್ರ ಸಂಕಷ್ಟ! ಪ.ಪಂ ನಿರ್ಲಕ್ಷ್ಯಕ್ಕೆ ಕಂಬಾರಗಟ್ಟಿ ನಿವಾಸಿಗಳ ಆಕ್ರೋಶ

ಬೋರವೆಲ್ ಒಣಗಿ ಕುಡಿಯುವ ನೀರಿನ ತೀವ್ರ ಸಂಕಷ್ಟ! ಪ.ಪಂ ನಿರ್ಲಕ್ಷ್ಯಕ್ಕೆ ಕಂಬಾರಗಟ್ಟಿ ನಿವಾಸಿಗಳ ಆಕ್ರೋಶ  Kambaragatti residents outraged by PP's negligence as borewells dry up, causing severe drinking wat

ಲೋಕದರ್ಶನ ವರದಿ  

ಮುಂಡಗೋಡ 09 :  ಪಟ್ಟಣದ ಕಂಬಾರಗಟ್ಟಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸ್ಥಳೀಯ ನಿವಾಸಿಗಳು ಪಟ್ಟಣ ಪಂಚಾಯಿತಿ (ಪ.ಪಂ) ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 30 ವರ್ಷಗಳಿಂದ ಈ ಪ್ರದೇಶದ 20ಹಿ30 ಮನೆಗಳ ಜನರು ಹ್ಯಾಂಡ್ ಪಂಪ್ ಬೋರ್ವೆಲ್ ನೀರಿನ ಮೇಲೆಯೇ ಅವಲಂಬಿತರಾಗಿದ್ದರು. ಆದರೆ ಕಳೆದ ಮೂರು ತಿಂಗಳಿಂದ ಹ್ಯಾಂಡ್ ಪಂಪ್ ಬೋರ್ವೆಲ್ ಸಂಪೂರ್ಣವಾಗಿ ಹಾಳಾಗಿರುವುದರಿಂದ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹ್ಯಾಂಡ್ ಪಂಪ್ ಬೋರ್ವೆಲ್ ಬಳಿ ಮಹಿಳೆಯರು ಹಾಗೂ ನಿವಾಸಿಗಳು ಖಾಲಿ ಬಿಂದಿಗೆಗಳನ್ನು ಇಟ್ಟು ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನ ಹೊರಹಾಕಿದರು. ಹಲವು ವರ್ಷಗಳಿಂದ ಇದೇ ಬೋರ್ವೆಲ್ ಈ ಭಾಗದ ಪ್ರಮುಖ ಕುಡಿಯುವ ನೀರಿನ ಮೂಲವಾಗಿದ್ದು, ಅದು ಹಾಳಾದ ನಂತರ ಪರ್ಯಾಯ ವ್ಯವಸ್ಥೆ ಮಾಡದೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರ ಹೇಳಿಕೆಯಂತೆ, ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ದುರಸ್ತಿ ಕಾರ್ಯ ಕೈಗೊಳ್ಳಲಾಗಿಲ್ಲ. ದೂರವಾಣಿ ಮೂಲಕವೂ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀರಿನ ಕೊರತೆಯಿಂದ ಮಹಿಳೆಯರು ಹಾಗೂ ಮಕ್ಕಳು ದೂರದ ಪ್ರದೇಶಗಳಿಂದ ನೀರು ತರುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದು, ಇದರಿಂದ ದಿನನಿತ್ಯದ ಜೀವನ ತೀವ್ರ ತೊಂದರೆಗೆ ಸಿಲುಕಿದೆ. ಜೊತೆಗೆ ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಸಾರ್ವಜನಿಕ ಆರೋಗ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಹೀಗಾಗಿ, ಹಾಳಾದ ಹ್ಯಾಂಡ್ ಪಂಪ್ ಬೋರ್ವೆಲ್ ಅನ್ನು ತಕ್ಷಣ ದುರಸ್ತಿ ಮಾಡಿ, ಕಂಬಾರಗಟ್ಟಿ ಪ್ರದೇಶಕ್ಕೆ ಶಾಶ್ವತ ಹಾಗೂ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಂಬಂಧಿತ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.