ಸುವರ್ಣ ಮಹೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ,

ಜಮಖಂಡಿ: 23:ತಾಲೂಕಿನ ಶೂರ್ಪಾಲಿ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ 150 ಶತಮಾನೋತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ನ.26ರಂದು ಆಯೋಜಿಸಲಾಗಿದೆ ಎಂದು ಶೂರ್ಪಾಲಿ ಪಿಕೆಪಿಎಸ್ ಅಧ್ಯಕ್ಷ ರಮೇಶ ಕಣಬೂರ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, 1871ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ಅಧ್ಯಯನ ಮಾಡಿ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವದು ಹೆಮ್ಮೆಯ ಸಂಗತಿ. ವಿವಿಧ ಉನ್ನತ ಹುದ್ದೆಯಲ್ಲಿರುವ ಸುಮಾರು 500ಜನ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವದು ವಿಶೇಷವಾಗಿದೆ ಎಂದರು.

ಈ ಶಾಲೆ ಪ್ರಾರಂಭದ ದಿನದಿಂದಲೂ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ 80ಕ್ಕೂ ಹೆಚ್ಚು ಶಿಕ್ಷಕರನ್ನು ಹಾಗೂ ಅವರ ಕುಟುಂಬದ ಸದಸ್ಯರನ್ನು ಗೌರವಿಸಿ ಗುರುವಂದನೆ ಸಲ್ಲಿಸಲಾಗುವದು.  ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ವಂತಿಗೆ ಸಂಗ್ರಹಿಸಿ ಶಾಲಾ ತಡೆಗೋಡೆ, ರಂಗಮಂದಿರ ಹಾಗೂ 1ಕೊಠಡಿ ನಿರ್ಮಾಣ   ಕಾರ್ಯ ಕೈಗೊಳ್ಳಲಾಗಿದೆ ಎಂದರು. 

ನ.25ರಂದು ಬೆಳೆಗ್ಗೆ 9.30ಕ್ಕೆ ಶಾಲೆಯಿಂದ ಭುವನೇಶ್ವರಿ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿದ ವಾದ್ಯಮೇಳದೊಂದಿಗೆ ಅಕ್ಷರ ರಥೋತ್ಸವ ಜರುಗುವದು. ಈ ರಥೋತ್ಸವದಲ್ಲಿ ಶಾಲಾಮಕ್ಕಳು ಮಹಾಪುರುಷರ, ಸಾಹಿತಿಗಳ ವೇಷ ಧರಿಸಿ ಪಾಲ್ಗೊಳ್ಳುವದು ವಿಶೇಷವಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿದ್ಯವನ್ನು ತಾಳಿಕೋಟಿ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು ವಹಿಸುವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರೆಪ್ಪ ಉದ್ಘಾಟಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು, ಶಾಸಕ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸುವರು, ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ಸಂಸದ ಪಿ.ಸಿ. ಗದ್ದಿಗೌಡ ಸೇರಿದಂತೆ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ವಿಪ ಸದಸ್ಯರು, ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಅಂದು ಸಂಜೆ 7ಘಂಟೆಗೆ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗುವವು. ನ. 26ರಂದು ಬೆಳೆಗ್ಗೆ 9ಘಂಟೆಗೆ ಪ್ರೌಢಶಾಲಾ ಆವರಣದಲ್ಲಿ ಉಚಿತ ವೈದ್ಯಕೀಯ ತಪಾಸನೆ ಮತ್ತು ರಕ್ತದಾನ ಶಿಬಿರ ನಡೆಯುವದು. ನಂದಗಾಂವ ಭೂಕೈಲಾಸ ಮಠದ ಮಹಾದೇವ ಮಹಾರಾಜರು ದಿವ್ಯ ಸಾನ್ನಿದ್ಯವಹಿಸುವರು, ಹಾಸನ ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಕಾರ್ಯಕ್ರಮ ಉದ್ಘಾಟಿಸುವರು, ಟಿ.ಎಚ್.ಒ ಗೈಬುಸಾಬ ಗಲಗಲಿ ಅಧ್ಯಕ್ಷತೆ ವಹಿಸುವರು, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳುವರು ಎಂದರು.

ಮ.1ಘಂಟೆಗೆ ಗುರುನಮನ ಕಾರ್ಯಕ್ರಮದ ದಿವ್ಯ ಸಾನ್ನಿದ್ಯವನ್ನು ಕೊಣ್ಣೂರ ಕಲ್ಯಾಣ ಮಠದ ಡಾ. ವಿಶ್ವಪ್ರಭು ಶಿವಾಚಾರ್ಯ ಶ್ರೀಗಳು ವಹಿಸುವರು, ಕನ್ನೂರ ನಿಸರ್ಗಧಾಮ ಮಠದ ರವೀಂದ್ರನಾಥ ಮಹಾರಾಜರು ಸಾನ್ನಿದ್ಯವಹಿಸುವರು, ವಿಜಯಪುರ ಚಾಣಕ್ಯ ಕರಿಯರ್ ಆಕಾಡೆಮಿಯ ಎನ್.ಬಿ.ಬಿರಾದಾರ ಕಾರ್ಯಕ್ರಮ ಉದ್ಘಾಟಿಸುವರು, ಶ್ರೀಕಾಂತ ತುಬಚಿ ಅಧ್ಯಕ್ಷತೆ ವಹಿಸುವರು, ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ವಿಶೇಷ ಉಪನ್ಯಾಸ ನೀಡುವರು, ವಿಶ್ರಾಂತ ಆಯುಕ್ತ ಸಿದ್ರಾಮ ಮನಹಳ್ಳಿ, ಸಂಗಪ್ಪ ಜಮಖಂಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಸಂಜೆ 7ಘಂಟೆಗೆ ಸ್ಟಾರ್ ಪ್ಲಸ್ ವಾಹಿನಿಯ ಇಂಡಿಯಾ ಡಾನ್ಸಿಂಗ್ ಸುಪರ್ಸ್ಟಾರ್ ಹಾಗೂ ಝೀ ಕನ್ನಡ ವಾಹಿನಿಯ ಕುಣಿಯೋನು ಬಾರಾ ಕಾರ್ಯಕ್ರಮದ ವಿಜೇತ ತಂಡ ಮಂಗಳೂರಿನ ಹೆಜ್ಜೆನಾದ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗುವದು ಎಂದು ತಿಳಿಸಿದರು.

ರಾಮಪ್ಪ ಬಳೋಲ, ಗಿರಮಲ್ಲ ಜಮಖಂಡಿ, ಸಿದ್ದಗಿರಿ ಹುನ್ನೂರ, ಜಿ.ಬಿ. ಚಿನ್ನಾಮಲ್ಲಾ, ಅಪ್ಪಾಸಾಬ ಕಲ್ಲೋಳ್ಳಿ, ಅಡಿವೆಪ್ಪ ತೇಲಿ, ಈಶ್ವರ ಮಳಗೊಂಡ, ನರಸಿಂಹ ಕಲ್ಲೋಳ್ಳಿ, ಚನಗಿರಿ ಹೊಸೂರ, ಬಿ.ಎನ್.ಜಮಖಂಡಿ ಇದ್ದರು.