4 ಅಡಿ ಉದ್ದದ ಮೊಸಳೆ ಹಿಡಿದು ನದಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ
ಲೋಕದರ್ಶನ ವರದಿ
ದಾಂಡೇಲಿ 24: ದಾಂಡೇಲಿಯಲ್ಲಿ ಸುರಿದ ಮಳೆಯ ರಭಸಕ್ಕೆ ಕಾಳಿನದಿಯಲ್ಲಿದ್ದ ಮೊಸಳೆಯೊಂದು ಪಟೇಲ ನಗರದ ಗಲ್ಲಿ ಗಲ್ಲಿಯ ರಸ್ತೆಗಳಲ್ಲಿ ತಿರುಗಾಡತೊಡಗಿತು. ರಾತ್ರಿಯ ವೇಳೆ ಕಾಣಿಸಿಕೊಂಡ ಈ ಮೊಸಳೆಯಿಂದಾಗಿ ಸ್ಥಳೀಯರು ಆತಂಕಗೊಂಡು ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದರು. 4 ಅಡಿ ಉದ್ದದ ಮೊಸಳೆ ಮರಿಯನ್ನು ಉರಗತಜ್ಞ ರಜಾಕ್ ಶಾ ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಆಗಮಿಸಿ ಸುರಕ್ಷಿತವಾಗಿ ಹಿಡಿದು ನದಿಗೆ ಬಿಟ್ಟರು. ಸ್ಥಳೀಯ ಜನರು ನಿಟ್ಟುಸಿರು ಬಿಡುವಂತಾಯಿತು. ಮೇಲಿಂದ ಮೇಲೆ ಈ ಭಾಗದಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು, ಜನರ ಸುರಕ್ಷತೆಗಾಗಿ ನದಿಯ ದಡದಲ್ಲಿ ರಕ್ಷಣಾ ಬೇಲಿಯನ್ನು ಇಲಾಖೆಯಿಂದ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದರು.