ಕೃಷಿಕ ಶಂಕರ ಲಂಗಟಿ ಅವರಿಗೆ ಧಾರವಾಡ ಕೃಷಿ ವಿವಿಯಿಂದ ಡಾಕ್ಟರೇಟ್

Farmer Shankar Langati receives doctorate from Dharwad Agricultural University

ಕೃಷಿಕ ಶಂಕರ ಲಂಗಟಿ ಅವರಿಗೆ ಧಾರವಾಡ ಕೃಷಿ ವಿವಿಯಿಂದ ಡಾಕ್ಟರೇಟ್  

ನೇಸರಗಿ 15: ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದ ಪ್ರಗತಿಪರ ಸಾವಯವ ಕೃಷಿಕ ಶಂಕರ ಹನಮಂತ ಲಂಗಟಿ ಇವರು ಕೃಷಿ ವಿಶ್ವವಿದ್ಯಾಲಯ, ಧಾರವಾಡದಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.  ನಿನ್ನೆ ದಿ 14 ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಿದ 38ನೇ ಘಟಿಕೋತ್ಸವದಲ್ಲಿ ಶಂಕರ ಅವರಿಗೆ ಕರ್ನಾಟಕದ ರಾಜ್ಯಪಾಲ ಥಾರವಚಂದ ಗೆಹಲೊಟ್ ಅವರು ಪದವಿ ಪ್ರದಾನ ಮಾಡಿದರು. ಕರ್ನಾಟಕ ಸರ್ಕಾರದ ಮಾನ್ಯ ಕೃಷಿ ಸಚಿವರಾದ ಎನ್‌. ಚಲುವರಾಯಸ್ವಾಮಿ ಮತ್ತು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಲ್‌. ಪಾಟೀಲ ಇವರು ಉಪಸ್ಥಿತರಿದ್ದರು.  

ಶಂಕರ ಲಂಗಟಿ ಇವರು ಕಳೆದ 40 ವರ್ಷಗಳಿಂದ ಸುಸ್ಥಿರ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿದ್ದು, ಸ್ಥಳೀಯ ಬೆಳೆ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ.  ನಾಲ್ಕನೇ ತರಗತಿಯವರೆಗೆ ಶಿಕ್ಷಣ ಪಡೆದ ಶ್ರೀಯುತರು ಒಟ್ಟು 12 ಎಕರೆ ಜಮೀನನ್ನು ತಮ್ಮ ಸ್ವಗ್ರಾಮ ಗುಂಡೇನಟ್ಟಿಯಲ್ಲಿ ಹೊಂದಿದ್ದು 260 ಕ್ಕೂ ಅಧಿಕ ಭತ್ತದ ತಳಿಗಳು, 19 ತರಕಾರಿಗಳು, 9 ಸಿರಿಧಾನ್ಯಗಳು, 20 ಏಕದಳ, ದ್ವಿದಳ ಮತ್ತು ಎಣ್ಣೆಕಾಳು ಬೆಳೆಗಳನ್ನು ಸಂರಕ್ಷಿಸಿದ್ದಾರೆ.  ಇವರೆ ಸ್ಥಾಪಿಸಿರುವ ಸಿದ್ಧಾರೂಡ ಕಮ್ಯುನಿಟಿ ಸೀಡ್ ಬ್ಯಾಂಕ್ ಮೂಲಕ ಕರ್ನಾಟಕ ಮತ್ತು ಪಕ್ಕದ ರಾಜ್ಯದ ರೈತರಿಗೆ ದೇಶಿ ಬೀಜಗಳನ್ನು ಸಂರಕ್ಷಿಸುವ ಮತ್ತು ಬೆಳೆಸುವ ತಂತ್ರಜ್ಞಾನವನ್ನು ನೀಡುತ್ತಿದ್ದಾರೆ.  ಗುಣಿ ಪದ್ಧತಿಯಂತಹ ನಾವಿಣ್ಯ ಪೂರ್ಣ ತಂತ್ರಜ್ಞಾನದ ಮುಖಾಂತರ ರಾಗಿ ಬೆಳೆದು, ಮೌಲ್ಯವರ್ಧನೆ ಮಾಡಿ ಮಹಿಳಾ ಸ್ವಸಹಾಯ ಸಂಘಗಳ ಮುಖಾಂತರ ರೈತರಲ್ಲಿ ದೇಶಿ ಬೀಜದ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಭಾರತ ಸರ್ಕಾರದ ನವದೆಹಲಿಯ ಪಿಪಿವಿ ಎಫ್‌ಆರ್‌ಎ ಸಂಸ್ಥೆಯು ನೀಡುವ ಪ್ಲಾಂಟ್ ಜಿನೊಮ್ ಸೇವಿಯರ್ ಅವಾರ್ಡ್‌, ಕೃಷಿ ಋಷಿ ಪ್ರಶಸ್ತಿ ಮತ್ತು ಅತ್ಯುತ್ತಮ ಕೃಷಿಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.  ತಳಮಟ್ಟದ ಕೃಷಿ ತಂತ್ರಜ್ಞರಾಗಿರುವ ಹಾಗೂ ನೂತನ ನಾವಿಣ್ಯಪೂರ್ಣ ತಾಂತ್ರಿಕತೆಗಳನ್ನು ಆವಿಷ್ಕರಿಸುವ ಮತ್ತು ದೇಶಿ ಜ್ಞಾನವನ್ನು ರೈತರಿಗೆ ಧಾರೆ ಎರೆಯಲು ಸನ್ನದ್ದರಾಗಿದ್ದಾರೆ. ಇವರು ಕಳೆದ ಹತ್ತು ವರ್ಷಗಳಿಂದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಪಿಪಿವಿ ಎಫ್‌ಆರ್‌ಎ ಸಂಸ್ಥೆಯ ವತಿಯಿಂದ ತಮ್ಮ ದೇಶಿ ತಳಿಗಳನ್ನು ನೊಂದಾಯಿಸಲು ಕೃಷಿ ವಿಜ್ಞಾನ ಕೇಂದ್ರವು ಪ್ರಯತ್ನಿಸಲಾಗುತ್ತಿದ್ದು, ಎಲ್ಲ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಧಿಕ ಇಳುವರಿಯನ್ನು ಪಡೆಯುತ್ತಿದ್ದಾರೆ ಹಾಗೂ ಕೇಂದ್ರವು ಕೆಲವೊಂದು ಪ್ರಗತಿಪರ ರೈತ ಪ್ರಶಸ್ತಿಗಳನ್ನು ಪಡೆಯುವಲ್ಲಿ ಮಾರ್ಗದರ್ಶನ ನೀಡಿದೆ.   

ಶ್ರೀಯುತರ ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಸಂದ ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಹಾಗೂ ವಿಜ್ಞಾನಿಗಳಾದ ಜಿ. ಬಿ. ವಿಶ್ವನಾಥ, ಎಸ್‌. ಎಮ್‌. ವಾರದ, ಡಾ. ಎಸ್‌. ಎಸ್‌. ಹಿರೇಮಠ, ಪ್ರವೀಣ ಯಡಹಳ್ಳಿ, ಶಂಕರಗೌಡ ಪಾಟೀಲ ಹಾಗೂ ಜಿಲ್ಲೆಯ ಸಮಸ್ತ ರೈತ ಸಮುದಾಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.