ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ  Demand to declare the taluk drought-hit


ತಾಳಿಕೋಟೆ ಸೆ.10: ಮುದ್ದೇಬಿಹಾಳ, ತಾಳಿಕೋಟೆ ಹಾಗೂ ದೇವರಹಿಪ್ಪರಗಿ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಆಗ್ರಹಿಸಿ ಸಿಆರ್‌ಆರ್ಡಿ ಕರ್ನಾಟಕ ರೈತ ಸಂಘದ ವತಿಯಿಂದ ಸ್ಥಳೀಯ ಪ್ರವಾಸಿ ಮಂದಿರದ ಬಳಿ ನಡೆಯುತ್ತಿರುವ ರೈತರ ಅಹೋರಾತ್ರಿ ಧರಣಿ ಬುಧವಾರ ಏಳನೇ ದಿನಕ್ಕೆ ಕಾಲಿಟ್ಟಿತು.  

ಧರಣಿ ಸ್ಥಳಕ್ಕೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು. ಸಾಲವಾಡಗಿ) ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಮಾತನಾಡಿದ ಅವರು, ಬರಪೀಡಿತ ತಾಲೂಕುಗಳ ಎರಡನೇ ಪಟ್ಟಿಯಲ್ಲಿ ಮುದ್ದೇಬಿಹಾಳ, ತಾಳಿಕೋಟೆ ಹಾಗೂ ದೇವರಹಿಪ್ಪರಗಿ ತಾಲೂಕುಗಳ ಹೆಸರು ಇರಬೇಕೆಂದು ನೀರೀಕ್ಷಿಸಲಾಗಿತ್ತು. ಆದರೆ ಮೂರು ತಾಲೂಕುಗಳನ್ನು ಘೋಷಿಸದಿರುವುದು ನೋವು ತಂದಿದೆ ಎಂದರು.  

ಈ ಕುರಿತು ಚರ್ಚಿಸಲು ಸೆ.21ರಿಂದ ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಮೂರೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸುವಂತೆ ಪ್ರಯತ್ನಿಸುವುದಾಗಿ ತಿಳಿಸಿದರು. ಬೇಡಿಕೆ ಈಡೇರದಿದ್ದರೆ ರೈತರೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.  

ಸಿಆರ್‌ಆರ್ಡಿ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮೂರೂ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವವರೆಗೆ ರೈತರ ಧರಣಿ ಮುಂದುವರಿಯಲಿದೆ ಎಂದರು.  

ತಾಲೂಕಾಧ್ಯಕ್ಷ ಬಾಳಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ಮಡಿವಾಳಪ್ಪಗೌಡ ಬಿರಾದಾರ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮಗಳ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.