ಕಾರು ಅಪಘಾತ :ಕಂದಾಯ ಇಲಾಖೆಯ ಸಿಬ್ಬಂದಿ ತಲಾಟಿ ಗೋಪಾಲ ಎಂ. ಮೃತ
ಮುಂಡಗೋಡ 14: ಇಲ್ಲಿನ ತಹಶೀಲ್ದಾರ ಕಚೇರಿಯ ಮೂರು ವಿಲೇಜ್ ಅಕೌಂಟಂಟ್ಗಳು (ತಲಾಟಿಗಳು) ಹುಬ್ಬಳ್ಳಿಯಿಂದ ಮುಂಡಗೋಡದತ್ತ ಪ್ರಯಾಣಿಸುತ್ತಿದ್ದ ವೇಳೆ, ಅವರು ಸಾಗುತ್ತಿದ್ದ ಕಾರು ತಾಯವ್ವನ ದೇವಸ್ಥಾನದ ಬಳಿ ರಸ್ತೆಯ ಬದಿಯ ಗುಂಡಿಗೆ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ತಲಾಟಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಭಾನುವಾರ ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟ ತಲಾಟಿಯನ್ನು ಗೋಪಾಲ ಎಂ. (37) ಎಂದು ಗುರುತಿಸಲಾಗಿದ್ದು, ಅವರು ಸೌಮ್ಯ ವ್ಯಕ್ತಿತ್ವದ ಹಾಗೂ ಪ್ರಮಾಣಿಕ ಸೇವೆ ಸಲ್ಲಿಸುತ್ತಿದ್ದ ಜನಸ್ನೇಹಿ ಅಧಿಕಾರಿ ಎಂದು ಸಹೋದ್ಯೋಗಿಗಳು ಸ್ಮರಿಸಿದ್ದಾರೆ.
ಅಪಘಾತದಲ್ಲಿ ಮಂಜುನಾಥ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಗೋವಿಂದ ರಾಠೋಡ ಅವರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತ ನಡೆದ ಸುಮಾರು 5ಹಿ6 ಗಂಟೆಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ಭಾನುವಾರ ತಡರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಅಪಘಾತಕ್ಕೀಡಾದ ಕಾರು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಈ ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ ಶಂಕರ ಗೌಡಿ, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಇಡೀ ತಾಲೂಕು ತೀವ್ರ ಶೋಕದಲ್ಲಿ ಮುಳುಗಿದೆ. ಜನಸ್ನೇಹಿ ತಲಾಟಿ ಗೋಪಾಲ ಎಂ. ಅವರ ಅಕಾಲಿಕ ನಿಧನಕ್ಕೆ ಎಲ್ಲೆಡೆಯಿಂದ ಕಂಬನಿ ಮಿಡಿದಿದೆ.