ವಂದೇ ಮಾತರಂ’ ಕುರಿತು ಬಿಜೆಪಿ ಹೇಳಿಕೆ ಹಾಸ್ಯಾಸ್ಪದ: ಅಶೋಕ ಮಂದಾಲಿ

ವಂದೇ ಮಾತರಂ’ ಕುರಿತು ಬಿಜೆಪಿ ಹೇಳಿಕೆ ಹಾಸ್ಯಾಸ್ಪದ: ಅಶೋಕ ಮಂದಾಲಿ  BJP's statement on 'Vande Mataram' is ridiculous: Ashok Mandali

‘

ಗದಗ 27 : ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಪಾತ್ರವಿಲ್ಲದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಇಂದು ರಾಷ್ಟ್ರಭಕ್ತಿಯ ಗುತ್ತಿಗೆ ಪಡೆದವರಂತೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಆರೋಪಿಸಿದರು.  

‘ವಂದೇ ಮಾತರಂ’ ಗೀತೆಯನ್ನು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಮೊಟಕುಗೊಳಿಸಿತು ಎಂದು ಬಿಜೆಪಿ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿದೆ. ವಾಸ್ತವವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್, ಪಂಡಿತ್ ಜವಾಹರಲಾಲ್ ನೆಹರು, ಮಹಾತ್ಮ ಗಾಂಧೀಜಿ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರ ಅಭಿಪ್ರಾಯ ಮತ್ತು ಮಾರ್ಗದರ್ಶನದ ಆಧಾರದ ಮೇಲೆಯೇ ಈ ಕುರಿತು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.  

1937ರ ಅಕ್ಟೋಬರ್ 28ಹಿ29 ಕೊಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಆಜಾದ್ ಹಾಗೂ ಮಹಾತ್ಮ ಗಾಂಧೀಜಿ ಸೇರಿದಂತೆ ಪ್ರಮುಖ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದು, ನಿರ್ಧಾರಕ್ಕೆ ಅನುಮೋದನೆ ನೀಡಿದ್ದರು ಎಂದು ಅಶೋಕ ಮಂದಾಲಿ ಹೇಳಿದರು.  

ರಾಷ್ಟ್ರದ ಸಮಗ್ರತೆ ಮತ್ತು ಸರ್ವಧರ್ಮೀಯರ ಐಕ್ಯತೆಗಾಗಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡಲು ನಿರ್ಧರಿಸಲಾಗಿತ್ತು. ಈ ಐತಿಹಾಸಿಕ ಹಿನ್ನೆಲೆಯನ್ನು ಮರೆಮಾಚಿ ಬಿಜೆಪಿ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚುತ್ತಿದೆ ಎಂದು ಅವರು ಆರೋಪಿಸಿದರು.  

 ‘ವಂದೇ ಮಾತರಂ’ ಕೇವಲ ಘೋಷಣೆಯಲ್ಲ, ಅದು ಭಾರತೀಯರ ಸ್ವಾಭಿಮಾನದ ಸಂಕೇತ. 1937ರಲ್ಲಿ ಟ್ಯಾಗೋರ್, ಬೋಸ್, ನೆಹರು ಹಾಗೂ ಪಟೇಲ್ ಅವರು ಕೈಗೊಂಡ ನಿರ್ಧಾರವು ಭಾರತದ ಏಕತೆಯನ್ನು ಕಾಪಾಡುವ ದೂರದೃಷ್ಟಿಯ ಹೆಜ್ಜೆಯಾಗಿತ್ತು. ಚುನಾವಣೆ ಸಮೀಪಿಸಿದಾಗಲೆಲ್ಲ ಇತಿಹಾಸವನ್ನು ತಿರುಚಿ ಜನರ ಭಾವನೆಗಳೊಂದಿಗೆ ಆಟವಾಡುವ ಬಿಜೆಪಿಯ ರಾಜಕೀಯವನ್ನು ಕರ್ನಾಟಕದ ಜನತೆ ಒಪ್ಪುವುದಿಲ್ಲ ಎಂದು ಅಶೋಕ ಮಂದಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.