ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ‘ಉದಯರೂಪ’ ಉದ್ಘಾಟನೆ

ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ‘ಉದಯರೂಪ’ ಉದ್ಘಾಟನೆ  ‘Udayaroopa’ launched to eradicate the bonded labour system

ಲೋಕದರ್ಶನ ವರದಿ 

ಬೆಳಗಾವಿ 04: ಜೀತ ಕಾರ್ಮಿಕ ಪದ್ಧತಿಯ ವಿರುದ್ಧ ಹೋರಾಟವನ್ನು ಬಲಪಡಿಸುವ ಉದ್ದೇಶದಿಂದ, ಜೀತ ಕಾರ್ಮಿಕ ಪದ್ಧತಿಯಿಂದ ಮುಕ್ತರಾದ ಕಾರ್ಮಿಕರ ನೇತೃತ್ವದಲ್ಲಿ ಕರ್ನಾಟಕ ರಾಜ್ಯಮಟ್ಟದ ಜೀತ ಕಾರ್ಮಿಕರ ಸಂಘಟನೆ ಉದಯೋನ್ಮುಖ ಸಂಘದ ಬೆಳಗಾವಿ ವಿಭಾಗದ ಸ್ಥಳೀಯ ಘಟಕ ಉದಯರೂಪ ಸೆಪ್ಟೆಂಬರ್ 3ರಂದು ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಮಾಲಿಯನ್ ಬ್ಯಾಂಕ್ವೆಟ್ ಹಾಲ್ನಲ್ಲಿ ಉದ್ಘಾಟಿಸಲಾಯಿತು.  

ಸ್ಪಂದನ ಸಂಸ್ಥೆ, ಬೆಳಗಾವಿ ಹಾಗೂ ಉದಯೋನ್ಮುಖ ಸಂಘ, ರಾಮನಗರ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಆರು ಜಿಲ್ಲೆಗಳ ಜೀತ ಕಾರ್ಮಿಕ ಪದ್ಧತಿಯಿಂದ ಮುಕ್ತರಾದ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.  

ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ಪಂದನ ಸಂಸ್ಥೆಯ ಕಾರ್ಯದರ್ಶಿ ವಿ. ಸುಶೀಲ ಅವರು, ಜೀತ ಪದ್ಧತಿಯಿಂದ ಕಾರ್ಮಿಕರನ್ನು ಮುಕ್ತಗೊಳಿಸುವುದರ ಜೊತೆಗೆ ಅವರ ಪುನರ್ವಸತಿ, ಸ್ವಯಂ ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ಅಗತ್ಯ ತರಬೇತಿ ನೀಡುವಲ್ಲಿ ಸ್ಪಂದನ ಸಂಸ್ಥೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿಯೂ ಸಂಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.  

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿಯ ಸದಸ್ಯ ಕಾರ್ಯದರ್ಶಿ ಕೆ. ಎನ್‌. ಶಿವಕುಮಾರ್ ಅವರು, ಜೀತ ಕಾರ್ಮಿಕ ಪದ್ಧತಿಯಿಂದ ಮುಕ್ತರಾದ ಪ್ರತಿಯೊಬ್ಬರೂ ಗೌರವ, ಸ್ವಾತಂತ್ರ್ಯ ಹಾಗೂ ಸಮಾನ ಅವಕಾಶಗಳೊಂದಿಗೆ ಬದುಕುವ ಸಮಾಜ ನಿರ್ಮಾಣಕ್ಕಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ನೆರೆದಿದ್ದವರಿಗೆ ಸಾಮೂಹಿಕವಾಗಿ ಪ್ರತಿಜ್ಞೆ ಬೋಧಿಸಿದರು.  

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ. ಎಂ. ಜಾನಕಿ ಅವರು ಮಾತನಾಡಿ, ಜೀತ ಪದ್ಧತಿಯು ಅತ್ಯಂತ ಶೋಷಣಾತ್ಮಕವಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುವ ಪದ್ಧತಿಯಾಗಿದೆ. ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಮಾಜದ ಎಲ್ಲ ವರ್ಗದವರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.  

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ನಾಗೇಶ್ ಡಿ. ಜಿ. ಅವರು ಮಾತನಾಡಿ, ಜೀತ ಪದ್ಧತಿಯು ಗಂಭೀರ ಸಾಮಾಜಿಕ ಶೋಷಣೆಯಾಗಿದೆ. ಕಾರ್ಮಿಕರನ್ನು ಜೀತಕ್ಕೆ ಒಳಪಡಿಸುವ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಜೀತ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು.  

‘ಉದಯರೂಪ’ ಸ್ಥಳೀಯ ಘಟಕದ ಮೂಲಕ ಜೀತ ಕಾರ್ಮಿಕ ಪದ್ಧತಿಯಿಂದ ಮುಕ್ತರಾದ ಕಾರ್ಮಿಕರನ್ನು ಸಂಘಟಿಸಿ, ಅವರ ಹಕ್ಕುಗಳ ರಕ್ಷಣೆ, ಪುನರ್ವಸತಿ, ಸಾಮಾಜಿಕ ಭದ್ರತೆ ಹಾಗೂ ಗೌರವಯುತ ಬದುಕಿಗಾಗಿ ನಿರಂತರವಾಗಿ ಧ್ವನಿ ಎತ್ತುವ ಉದ್ದೇಶ ಹೊಂದಲಾಗಿದೆ.  

ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಆರು ಜಿಲ್ಲೆಗಳ 60 ಜೀತ ಕಾರ್ಮಿಕ ಪದ್ಧತಿಯಿಂದ ಮುಕ್ತರಾದ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು, ಸ್ಪಂದನ ಸಂಸ್ಥೆಯ ಸಿಬ್ಬಂದಿ, ಭರತನಾಟ್ಯ ಕಲಾವಿದರು ಹಾಗೂ ಬೀದಿ ನಾಟಕ ಕಲಾವಿದರು ಭಾಗವಹಿಸಿದ್ದರು.