ನಾಗರ ಪಂಚಮಿ ಅಂಗವಾಗಿ ಮಹಿಳೆಯರಿಗೆ ‘ಪಂಚಮಿ ಹಾಡಿನ ಸ್ಪರ್ಧೆ’

ನಾಗರ ಪಂಚಮಿ ಅಂಗವಾಗಿ ಮಹಿಳೆಯರಿಗೆ ‘ಪಂಚಮಿ ಹಾಡಿನ ಸ್ಪರ್ಧೆ’  ‘Panchami Song Competition’ for women on the occasion of Nagara Panchami

ಲೋಕದರ್ಶನ ವರದಿ 

ಧಾರವಾಡ, ಆ.10: ದೇಶದಲ್ಲಿ ಕಾಲಕಾಲಕ್ಕೆ ವಿವಿಧ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವ ಪರಂಪರೆ ಬೆಳೆದುಬಂದಿದ್ದು, ಪ್ರತಿಯೊಂದು ಹಬ್ಬವೂ ವೈಜ್ಞಾನಿಕ ಮಹತ್ವವನ್ನು ಹೊಂದಿದೆ. ಹಬ್ಬಗಳು ನಮ್ಮ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ನಗರದ ನಿಡವಣಿಕಾಲೇಜಿನ ಪ್ರಾಚಾರ್ಯೆ ಪ್ರಭಾ ನಿಡವಣಿ ಹೇಳಿದರು.  

ನಗರದ ಪರಿಸರ ಭವನದಲ್ಲಿ ಜಿಲ್ಲಾ ನಾಗರಿಕ ಪರಿಸರ ಸಮಿತಿ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಆಶ್ರಯದಲ್ಲಿ ನಾಗರ ಪಂಚಮಿ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ‘ಪಂಚಮಿ ಹಾಡಿನ ಸ್ಪರ್ಧೆ’ ಉದ್ಘಾಟಿಸಿ ಅವರು ಮಾತನಾಡಿದರು.  

ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಕಚುಸಾಪ ಗೌರವಾಧ್ಯಕ್ಷ ಕೆ.ಎಚ್‌. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷೆ ಜಯಶ್ರೀ ಪಾಟೀಲ ಸ್ವಾಗತಿಸಿದರು. ಡಾ. ಷಣ್ಮುಖದೇವಿಮಠ ನಿರೂಪಿಸಿದರು. ಪರಿಸರ ಭವನದ ಕಾರ್ಯದರ್ಶಿ ವಿಲಾಸ ಕುಲಕರ್ಣಿ ವಂದಿಸಿದರು. ಸಂಗೀತ ತಜ್ಞರಾದ ಶ್ರುತಿ ಕುಲಕರ್ಣಿ ಹಾಗೂ ಮೇಘಾ ಹುಕ್ಕೇರಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.  

ಸ್ಪರ್ಧೆಯಲ್ಲಿ ಮಾಳಮಡ್ಡಿಯ ಸ್ವರ ಸಂಪದ ಮಂಡಳಿ ಪ್ರಥಮ, ಶ್ರೀ ರಂಜನಿ ಮಂಡಳಿ ದ್ವಿತೀಯ ಹಾಗೂ ಸಿಂಗಾರ ಸಖಿ ಬಳಗ ಮತ್ತು ಜಾನಪದ ಸಂಗೀತ ಬಳಗ ತೃತೀಯ ಸ್ಥಾನ ಪಡೆದವು. ರಿದಂ ಲೇಡೀಸ್ ಕ್ಲಬ್, ತುಂಗಭದ್ರಾ ಮಹಿಳಾ ಮಂಡಳಿ ಹಾಗೂ ವರದಾಂಜನೇಯ ಮಂಡಳಿ ಸಮಾಧಾನಕರ ಬಹುಮಾನ ಗಳಿಸಿದವು.  

ಇಪ್ಪತ್ತೈದಕ್ಕೂ ಹೆಚ್ಚು ಮಹಿಳಾ ಮಂಡಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕಸ್ತೂರಿ ಬೀರ​‍್ಪನವರ ಪ್ರಾರ್ಥನೆ ಹಾಡಿದರು. ಚಿನ್ಮಯಿ ಪಾಟೀಲ ಸ್ಪರ್ಧೆಯನ್ನು ನಡೆಸಿಕೊಟ್ಟರು. ಪದಾಧಿಕಾರಿಗಳಾದ ಗೀತಾ ಕುಂಬಿ, ಶ್ರೀನಿವಾಸ ಪಾಟೀಲ, ಪಂಪಾಪತಿ ಹಿರೇಮಠ, ಎಲ್‌.ಎಲ್‌. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.