ನಾಯಿಯ ಆತ್ಮಕಥೆ.

ನಾನು ಪುಟ್ಟ ಮರಿಯಾಗಿದ್ದಾಗ ನನ್ನ ಜೊತೆ ನನ್ನ ಸಹೋದರ ಸಹೋದರಿಯರಿದ್ದರು.  ನಾವೆಲ್ಲಾ ಅಮ್ಮ ಬರುವ ಹೊತ್ತಿಗೆ ಕಾದು  ಕುಳಿತು ಅವಳ ಮೈ ಅಡರುತ್ತಿದ್ದೆವು. ಹೊಟ್ಟೆ ತುಂಬಿದ ಮೇಲೆ ಚಿನ್ನಾಟವಾಡುತ್ತಿದ್ದೆವು. ನೋಡ ನೋಡುತ್ತಾ ನನ್ನ ಜೊತೆ ಹುಟ್ಟಿದವರೆಲ್ಲ ಎಲ್ಲಿ ಹೋದರು ಗೊತ್ತೇ ಆಗಲಿಲ್ಲ, ಮುಂದೆ ಸ್ವಲ್ಪೇ ದಿನದಲ್ಲಿ ಅಮ್ಮನೇ ಕಾಣೆಯಾದಳೋ ನಾನು ಬೇರೆಡೆಗೆ ಬಂದೆನೋ ಒಂದೂ ಗೊತ್ತಾಗಲಿಲ್ಲ. ನಾನು ಒಬ್ಬೋಂಟಿ ಯಾದದ್ದು ಮಾತ್ರ ಗೊತ್ತಾಗುತ್ತಿದೆ. ಹೊಟ್ಟೆ ಹಸಿದಾಗ ಆಹಾರ ಹುಡುಕುತ್ತ, ಹೊಟ್ಟೆ ತುಂಬಿದಾಗ ಮಲಗಿ ನಿದ್ರಿಸುತ್ತ,ಬೇರೆ ಏನೂ ಕೆಲಸವಿಲ್ಲದಾಗ ಬೊಗಳುತ್ತ ಇರುತ್ತಿದ್ದೆ.  ನಾನಿದ್ದ ಕಡೆಯೇ ಇದ್ದ ನಮ್ಮ ಶ್ವಾನ  ಗುಂಪಿನ ಅನೇಕರು ಒಬ್ಬರು ಬೊಗಳಿದೊಡನೆ ಉಳಿದವರೆಲ್ಲರೂ ತಾವೂ ದನಿಗೂಡಿಸುತ್ತಿದ್ದರು.  ನಾನೂ ಆ ವಿದ್ಯೆಯನ್ನು ಕಲಿತೆ. ರಾತ್ರಿಯಂತೂ ಯಾವ ಕಾರಣಕ್ಕೋ ಏನು ನಾವೆಲ್ಲ ಕೂಡಿ ಒಟ್ಟಿಗೆ ಬೊಗಳುತ್ತಿದ್ದೆವು. ಬಬರುತ್ತ ನಾನೂ ಅವರ ಗುಂಪಿನಲ್ಲಿ ಒಬ್ಬಳಾದೆ.  ನಾವೆಲ್ಲಾ ಒಟ್ಟಾದರೇನಾಯಿತು ಯಾರ ಹೊಟ್ಟೆಯೂ ತುಂಬುತ್ತಿರಲಿಲ್ಲ. ಎಲ್ಲಿಯೂ ಆಹಾರ ಸಿಕ್ಕುತ್ತಿರಲಿಲ್ಲ. ನೀರೂ ಸಿಗುತ್ತಿರಲಿಲ್ಲ.  ಮೊದಲಾದರೆ  ಕಸದ ತೊಟ್ಟಿಯ ಸುತ್ತಲೂ ಸುಳಿದು ಏನನ್ನಾದರೂ ಹುಡುಕುತ್ತಿದ್ದೆವು.  ಈಗ ಅಂತಹ ತೊಟ್ಟಿಗಳು ಇಲ್ಲ. ಎಲ್ಲಿಯೇ ಅಪ್ಪಿ ತಪ್ಪಿ ಏನಾದರೂ ತಿನ್ನಲು ಕಾಣಿಸಿದರೆ ನಾವೆಲ್ಲಾ ಮುಗಿಬಿದ್ದು ತಿಂದುಬಿಡುತ್ತೇವೆ.  ಅಂದೂ ಹಾಗೆ ಆಯಿತು.  ಅದೊಂದು ೪-೫ ವರ್ಷದ ಮಗು.  ತನ್ನ ಪಾಡಿಗೆ ತಾನು ಹೊರಟಿತ್ತು. ನಮ್ಮಲ್ಲಿ ಕೆಲವರು  ಅದರ ಬೆನ್ನು ಹತ್ತಿದರು.  ಅದು ಹೆದರಿ ಓಡತೊಡಗಿತು.  ನಮ್ಮನ್ನು ಹೆದರಿಸಿ ಓಡಿಸಲು ಅಲ್ಲಿ ಯಾರೂ  ಇರಲಿಲ್ಲ.  ಅದೇ ಧೈರ್ಯದ ಮೇಲೆ ನಮ್ಮಲ್ಲಿಯ ಒಂದು ಶ್ವಾನ ಹುಡುಗನ ಕಾಲು ಕಚ್ಚಿತು.  ಮೊದಲೇ ಹೆದರಿ ಓಡುತ್ತಿದ್ದ ಮಗು ಕಚ್ಚಿದ ರಭಸಕ್ಕೆ ಕೆಳಗೆ ಬಿದ್ದು ಬಿಟ್ಟಿತು.  ಮತ್ತೆ ಎದ್ದು ಓಡತೊಡಗಿತು.  ಅಷ್ಟರಲ್ಲಿ ಇನ್ನೊಂದು ಶ್ವಾನ  ಅದರ ಕೈ ಹಿಡಿದೆಳೆಯಿತು.  ಅದೇ ಸಂಧಿ ಸಾಧಿಸಿ ಇನ್ನೊಂದು ಅದರ ಕುತ್ತಿಗೆಯನ್ನು ಹಿಡಿಯಿತು.  ಮಗು ಚೀರಾಡುತ್ತ ಅಳುತ್ತಿತ್ತು.  ಆದರೆ ಪೂರ್ತಿ ನಮ್ಮ ಹಿಡಿತದೊಳಗೆ ಬಂದಿತ್ತು.  ನಮ್ಮಲ್ಲಾಗಲೇ ಕೆಲವರು ಅದರ ರಕ್ತದ ರುಚಿ ನೋಡಿದ್ದರು. 

ನಾನು ಮಾತ್ರ 'ಅಯ್ಯೋ ಪಾಪ' ಎಂದು ಕೊಂಡು ಸುಮ್ಮನಿದ್ದೆ.  ಆದರೆ ಹಸಿವೆ, ಎದುರಿಗೆ ಹಸಿ ಮಾಂಸ ನನಗೂ ತಡೆಯಲಾಗಲಿಲ್ಲ.  ಒಬ್ಬೊಬ್ಬರಾಗಿ ಎಲ್ಲರೂ ಬಾಯಿ ಹಾಕಿದೆವು.  ಬಹಳ ದಿನಗಳ ನಂತರ ಸಿಕ್ಕಿದ ಮೃಷ್ಟಾನ್ನ ಭೋಜನವನ್ನು ಚಪ್ಪರಿಸಿ ಹೊಡೆದೆವು,  ನಂತರ ಅಲ್ಲಲ್ಲೇ ಸರಿದು ವಿಶ್ರಾಂತಿಗೆ ತೆರಳಿದೆವು.  ಮರುದಿನ ಮಾತ್ರ ನಮ್ಮ ಪಾಲಿಗೆ ನರಕ ಸದೃಶ ದಿನವಾಯಿತು.  ಆ ಮಗುವಿನ ಕಡೆಯವರೇ ಇರಬೇಕು. ಅವರೊಂದಿಗೆ ರಾತ್ರಿಯೆಲ್ಲಾ ವಿನಾಕಾರಣ ಬೊಗಳುತ್ತಿದ್ದ ನಮ್ಮಬೊಗಳಿಕೆಯನ್ನು ಕೇಳಿ ರೊಚ್ಚಿಗೆದ್ದ ಜನರೇ ಇರಬಹುದು ಹಿಂಡು ಹಿಂಡಾಗಿ ಬಂದು ನಮ್ಮನ್ನು ಅಟ್ಟಿಸಿ ಅಟ್ಟಿಸಿ ಹೊಡೆಯತೊಡಗಿದರು.  ನಾವೆಲ್ಲಾ ನಮ್ಮ ಶಕ್ತಿ ಮೀರಿ ಓಡತೊಡಗಿದೆವು.  ಆದರೆ ಕಲ್ಲು ಬಡಿದ ಕೆಲವರು ಸಿಕ್ಕಿ ಹಾಕಿಕೊಂಡರು.  ನಾನೂ ಸಿಕ್ಕಿ ಹಾಕಿಕೊಂಡೆ.   ಈಗ ನನಗೆ ಮೈತುಂಬ ಗಾಯಗಳಾಗಿವೆ ಈಗಲೋ ಆಗಲೋ ಎನ್ನುವಂತಿದೆ.  ಬದುಕಿದಷ್ಟು ದಿನವೂ ಉಪವಾಸ ಬೀಳಬೇಕಾಯಿತು.  ಒಂದೇ ದಿನ ಊಟ ಸಿಕ್ಕಿತೆಂದು ತಿಂದರೆ ಮಗುವನ್ನು ಕೊಂದ  ಪಾಪ ತಲೆಗೆ ಸುತ್ತಿಕೊಂಡಿತು. .  ಸಹಿಸಲಾರದ ನೋವನ್ನು ಅನುಭವಿಸುತ್ತಿದ್ದೇನೆ. ಮಗುವಿನ ಸಾವಿನ ಶೋಕವನ್ನು ಆಚರಿಸಲು ಅದರ ತಂದೆತಾಯಿ, ಬಳಗದರಾದರೂ ಇದ್ದಾರೆ.  ನನಗಾರು ಇದ್ದಾರೆ?  ನಾನು ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆಯಾಯಿತು.  ಹೊಟ್ಟೆಗಿಲ್ಲದಿದ್ದರೆ ನಾವೇನು ಮಾಡಬೇಕು?  ಹಸಿದ ಹೊಟ್ಟೆಗೆ ನೈತಿಕತೆ ತಿಳಿಯುತ್ತದೆಯೇ?  ನಮ್ಮನ್ನು ಈ ಸ್ಥಿತಿಗೆ ತಂದವರಿಗೆ ಶಿಕ್ಷೆ ಬೇಡವೇ?  ನಮ್ಮನ್ನು ಹುಟ್ಟಿಸಬೇಕೇಕೆ?  ಹುಟ್ಟಿಸಿದ ಮೇಲೆ  ಹೊಟ್ಟೆಗಿಲ್ಲದ ಪರಿಸ್ಥಿತಿಯನ್ನೇಕೆ ತರಬೇಕು? ನಾಯಿಯ ಆತ್ಮಕಥೆಯನ್ನೋದಿದ ಭಾಲಚಂದ್ರನಿಗೆ ಮಗುವಿನ ಬಗೆಗೆ ಅತೀವ ಕೆಡುಕೆನಿಸಿತು.  ಜೊತೆಗೆ ನಾಯಿಯ ಬಗೆಗೂ ಹೃದಯ ಮಿಡಿಯಿತು.  ಆ ನಾಯಿ ಕೇಳಿದ ಪ್ರಶ್ನೆಯನ್ನೇ ಅವನಿಗೂ ಕೇಳಬೇಕೆನಿಸಿತು. 

ಈಗ ಕೆಲದಿನಗಳ ಹಿಂದೆ ಅವನು ತಿರುಗಾಡಲು ಹೊರಟಾಗ ನಾಯಿಯೊಂದಿಗೆ ತಿರುಗಾಡುವ ಅನೇಕರೂ ಹೊರಟಿದ್ದರು.  ಅಥವಾ ನಾಯಿಯೇ ಅವರನ್ನು ಎಳೆದುಕೊಂಡು ಹೋಗುತ್ತಿತ್ತೆನ್ನಿ.  ಕೆಲವರು ನಾಯಿಯನ್ನು ಅದರ ಕೊರಳ ಪಟ್ಟಿಯ ಅಂಚನ್ನು ಹಿಡಿಯದೇ  ತಾವೇ ಅದರ ಹಿಂದಿನಿಂದ ನಡೆಯುತ್ತಿದ್ದರು.  ಅಂಥವರೊಬ್ಬರನ್ನು ಒಬ್ಬ ಮಹಿಳೆ ಗದರಿದಳು. ಅದಕ್ಕೆ ನಾಯಿ ಮಾಲೀಕರು , ' ಹೇ ಅದೇನೂ ಮಾಡುವುದಿಲ್ಲ' ಎಂದು ಸಮಜಾಯಿಷಿ ನೀಡಿದರು.  ಆದರೆ ಆ ಮಹಿಳೆ,'ಪ್ರಾಣಿ ಪ್ರಾಣಿಯೇ. ಏನೂ ಮಾಡುವುದಿಲ್ಲ ಎಂದು ಅದು ನಿಮಗೆ ಬರೆದು ಕೊಟ್ಟಿದೆಯೇ? ನಾಳೆ ನೀವೊಂದು ಹುಲಿಯನ್ನು ಸಾಕಿ, ಹೀಗೆಯೇ ಅದರ ಹಿಂದಿನಿಂದ ಓಡುತ್ತ,'ಅದು ಏನೂ ಮಾಡುವುದಿಲ್ಲ ಎಂದರೆ ಜನ ಕೇಳುತ್ತಾರೆಯೇ?' ಎಂದು ಜಗಳಕ್ಕೇ ನಿಂತರು. ಆದರೆ, 'ರಸ್ತೆ ಏನು ನಿಮ್ಮಪ್ಪನ ಮನೆಯ ಆಸ್ತಿಯೇ?' ಎನ್ನುತ್ತಾ ಅವನು ಆಗಲೇ ಬಹುದೂರ ಸಾಗಿದ ನಾಯಿಯ ಬೆನ್ನು ಹತ್ತಿದ.  ರಸ್ತೆಯಲ್ಲಿ ನಡೆದ ಜೋರು ಮಾತಿನತ್ತ ಲಕ್ಷ್ಯಗೊಟ್ಟು ನಡೆಯುತ್ತಿದ್ದ ಪಥಿಕರೊಬ್ಬರ ತೀರಾ ಹತ್ತಿರಕ್ಕೆ ಹೋದ ಆ ನಾಯಿ ಒಮ್ಮೆಲೇ ಬೊಗಳಿತು.  ಗಾಬರಿಬಿದ್ದ ಅವರು ಕಾಲ್ದಾರಿಯಿಂದ ಸರಿಯಲು ಹೋಗಿ ರಸ್ತೆಯಲ್ಲಿ ಅಂಗತ್ತಲಾಗಿ ಬೀಳುವುದಕ್ಕೂ ಹಿಂದಿನಿಂದ ಬಂದ  ಕಾರೊಂದು ಅವರ ಕೈಮೇಲಿನಿಂದ ಹಾಯುವುದಕ್ಕೂ ಸರಿಹೋಯಿತು.  ಆದರೂ ದಯಾಳುವಾದ ಆ ಕಾರಿನ ಮಾಲೀಕ ಕಾರು ನಿಲ್ಲಿಸಿ ಕೆಳಗಿಳಿದು ಪಥಿಕರನ್ನು ಕಾರಿನಲ್ಲಿ ಕರೆದುಕೊಂಡು ಆಸ್ಪತ್ರೆಗೆ ತೆರಳಿದ.  ಇದಾವುದರ ಪರಿವೆ ಇಲ್ಲದ ಆ ನಾಯಿ ಯಕಾರದ ಒತ್ತಿನಂತೆ ಅಲ್ಲಲ್ಲಿ ಕಾಲೆತ್ತುತ್ತಾ ತನ್ನ ಪಾಡಿಗೆ ತಾನು ಬೊಗಳುತ್ತ ಸಾಗಿತ್ತು. ಇದನ್ನೆಲ್ಲಾ ನೋಡುತ್ತಿದ್ದ ಮಹಿಳೆ ಮುಂದೆ ಬರುವಷ್ಟರಲ್ಲಿ ಗಾಬರಿಯಾದ ಮಾಲೀಕ ನಾಯಿಯನ್ನು ಅಲ್ಲೇ ಬಿಟ್ಟು ಓಡಿದ. ಇಷ್ಟಕ್ಕೆಲ್ಲ ಕರಣ ಅವನು ಹಾಗೂ ಅವನ ನಾಯಿ ಎನ್ನುವ ಸತ್ಯ ಆ ಮಹಿಳೆ ಹಾಗೂ ಆ ಮಾಲೀಕ ಇಬ್ಬರಿಗೆ ಗೊತ್ತು.  ಅವನೆಂದಂತೆ 'ಅದು ಏನೂ ಮಾಡಿರಲಿಲ್ಲ' ಪಾಪ ಬೊಗಳಿತ್ತಷ್ಟೇ. 

ಇದರಲ್ಲಿ ಸಮಾಜದ ಪಾತ್ರವೇನು?  ಮೇಲಿನಂತಹ ಅನಾಹುತಗಳಾಗಲು ಸಮಾಜದಲ್ಲಿ ಪ್ರಾಣಿಪ್ರಿಯರೆನ್ನಿಸಿಕೊಳ್ಳುವವರ  ವಂತಿಗೆ ಸಾಕಷ್ಟಿದೆ.  ಪ್ರಾಣಿಗಳನ್ನು ಪ್ರೀತಿಸಲಿ. ಆದರೆ ಮಾನವ ಮಗುವಿನ ಜೀವವೂ  ಅಷ್ಟೇ ಮುಖ್ಯವಲ್ಲವೇ?  ಬೀದಿ ನಾಯಿಗಳಿಗೆ ತಮ್ಮ ಮನೆಯಲ್ಲಿ ಉಳಿದ ಎರಡು ರೊಟ್ಟಿಗಳನ್ನು- ಅದೂ ಉಳಿದಿದ್ದರೆ , ಉಳಿದಿದ್ದ ದಿನ ಮಾತ್ರ - ತಿನ್ನಿಸಿ, ಅವುಗಳನ್ನು ಸಾಯಲೂ ಬಿಡದೆ ಬದುಕಿಸಿಟ್ಟು, ಅವು ಮತ್ತೆ ಅಂತಹ ಬೀದಿನಾಯಿಗಳ ಸಂತತಿ ಬೆಳೆಸುವಂತೆ ಮಾಡುತ್ತಾರೆ.  ಇನ್ನು ನಾಯಿಗಳನ್ನು ಸಾಕಿದವರು ಅದು ಗಂಡಾಗಿದ್ದರೆ,ಅದನ್ನು ಬೀಜಪ್ರಸಾರಕ್ಕೆ ಮುಕ್ತವಾಗಿ ಬಿಟ್ಟು, ತನ್ಮೂಲಕ ಬೀದಿನಾಯಿಗಳ ಸಂತತಿಯನ್ನು ಬೆಳೆಸಲು ಕಾರಣರಾಗುತ್ತಾರೆ.  ತಮ್ಮ ಮನೆಯ ನಾಯಿಯನ್ನು ಮಾತ್ರ ಜೋಪಾನಮಾಡುತ್ತಾರೆ.  ಹೆಣ್ಣಾಗಿದ್ದರೆ, ಅದಕ್ಕೆ ನ್ಯಾಯವಾಗಿ ದೊರಕಬೇಕಾಗಿದ್ದ ಲೈಂಗಿಕ ಸ್ವಾತಂತ್ರ್ಯವನ್ನು ಕೊಡದೇ ಬೆದೆಗೆ ಬಂದಾಗ ಕೂಡ ಕಟ್ಟಿಹಾಕಿ ಗರ್ಭಾ ಶಯದ ಕ್ಯಾನ್ಸರನಿಂದ ಸಾಯುವಂತೆ ಮಾಡುತ್ತಾರೆ. ಸಿರಿವಂತ ಶ್ವಾನಮಾಲೀಕರಿದ್ದರೆ ಸಂತಾನಹರಣ ಚಿಕಿತ್ಸೆ ಮಾಡಿಸುತ್ತಿರಬಹುದು.  ಆದರೆ ತಮಗೇ ಆಸ್ಪತ್ರೆಗೆ ಹೋಗುವ ಗತಿಯಿಲ್ಲದ  ಶ್ವಾನಧಣಿಗಳು ಹೀಗೆ ಮಾಡಿಸಬಲ್ಲರೇ? ಕೆಲಸಲ ನಗರ ಸಭೆಯವರು ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆಯನ್ನೋ, ಇಲ್ಲವೇ ಹಿಡಿದುಕೊಂಡು ಹೋಗಿ ಊರಹೊರಗೆ ಬಿಟ್ಟು ಬರುವುದನ್ನೋ ಮಾಡುತ್ತಾರೆ.  ಅದು ನಿರರ್ಥಕ ಎನ್ನುವುದು ಅವರಿಗೂ ಗೊತ್ತು.  ಸರಕಾರದ ಎಲ್ಲ ಕಾರ್ಯಕ್ರಮಗಳಂತೆ ಇದಕ್ಕೂ ಅಂಕಿಸಂಖ್ಯೆಗಳಿದ್ದರೆ ಆಯಿತು.  ಅವರ ಕೆಲಸ ಮುಗಿದಂತೆ. ನಾಯಿಯ ಬೊಗಳುವಿಕೆಯಿಂದ ನಿದ್ದೆಗೆಡಲಿ, ತಾವೇ ಸಾಕಿದ ಪ್ರಾಣಿ ತಮ್ಮ ಮುಂದೇ  ರೋಗ ಬಂದು ಸಾಯಲಿ,  ಏಕಾಂಗಿ ಮುದುಕರನ್ನೂ, ಮಕ್ಕಳನ್ನೂ ತಿಂದು ಸಾಯಿಸಲಿ ಸಮಾಜ ಮೂಕ ಪ್ರೇಕ್ಷಕ. ತನ್ನ ಸಂತತಿಯನ್ನು ಆಹಾರವಾಗಿ ಬಳಸುವ ಪ್ರಾಣಿಯ ಸಂತತಿ ಬೆಳೆಯದಂತೆ ನೋಡಿಕೊಳ್ಳುವುದು ಸಮಾಜದ ಕರ್ತವ್ಯವಲ್ಲವೇ?  ಸಾಕು ನಾಯಿಗಳಿಗಿಂತ ಹೀನ ಬಾಳು ಬಾಳುತ್ತಿರುವ ಮಾನವ ಶಿಶುಗಳ ಕಡೆಗೂ ಸ್ವಲ್ಪ ಗಮನ ಹರಿಸಿದರೆ ಪ್ರಾಣಿಪ್ರಿಯತೆಯ ಉತ್ತಮ ನಿದರ್ಶನವನ್ನು ನಡತೆಯಲ್ಲೂ ತೋರಿಸಬಹುದು.  ಪ್ರಾಣಿಗೆ ಅರೆಹೊಟ್ಟೆ ತಿನ್ನಿಸಿ ಅವಕ್ಕೆ ಸಾಯಲೂ ಬಿಡದೇ ಬದುಕಲೂ ಕೊಡದೇ ಇದ್ದರೆ ಅದೆಂಥ ಪ್ರಾಣಿಪ್ರಿಯತೆ?   

-ಭಾರತಿ ತೊರಗಲ್ಲ.

 ೯೪೮೧೫೨೧೧೧೫೦