ವಾಸ್ತವ ದೇವರನ್ನು ಪೂಜಿಸಬೇಕು : ಡಾ.ಬಸವಲಿಂಗ ಶ್ರೀಗಳು

ಗುಳೇದಗುಡ್ಡ 20:  ನಿಜವಾಗಿ ಈ ವಾಸ್ತವ ನಂಬಿಕೆಯಲ್ಲಿ ದೇವರಿದ್ದಾನೆ ಕಲ್ಲು, ಮಣ್ಣು ದೇವರೆಂದು ಪೂಜಿಸುವ  ಮೂಢನಂಬಿಕೆಯಿಂದ ಪ್ರತಿಯೊಬ್ಬರೂ ಹೊರ ಬರಬೇಕು. ನಡೆದಾಡುವ, ಮಾತನಾಡುವ  ತಂದೆ ತಾಯಿ, ದೀನ- ದಲಿತ, ಬಡವ, ಅಂಗವಿಕಲ, ನಿರ್ಗತಿಕರಲ್ಲಿ ದೇವರನ್ನು ಕಾಣಬೇಕು ಹಾಗೂ ಅವರನ್ನು ಪೂಜಿಸಬೇಕೆಂದು ಸಿದ್ದಯ್ಯನಕೋಟೆಯ ಡಾ.ಬಸವಲಿಂಗ ಶ್ರೀಗಳು ಹೇಳಿದರು. 

ಭಾನುವಾರ ಪಟ್ಟಣದ ಶ್ರೀಜಗದ್ಗುರು ಗುರುಸಿದೇಶ್ವರ ಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀಜಗದ್ಗುರು ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮಿಗಳ 36ನೇ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. 

 ವಚನಸಾಹಿತ್ಯದ ಅಧ್ಯಯನದಿಂದ ವ್ಯಕ್ತಿಯ ಬದುಕು ಪರಿವರ್ತನೆಗೊಳ್ಳುತ್ತದೆ. ಬಸವಾದಿ ಶಿವಶರಣರ ತತ್ವ, ಚಿಂತನೆಗಳನ್ನು ಹಾಗೂ ಅವರ ಆದರ್ಶ ಮಾರ್ಗವನ್ನು ಪ್ರತಿಯೊಬ್ಬರೂ ಪರಿಪಾಲಿಸಬೇಕೆಂದು  ಹೇಳಿದರು. 

ಅಕ್ಕಲಕೋಟೆ ಶ್ರೀಚಿಕ್ಕರೇವಣಸಿದ್ಧ ಶಿವಶರಣರು ಶರಣ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇತ್ತಿಚೆಗೆ ನಮ್ಮನ್ನಗಲಿದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸ್ಮಾರಕ ಮಹಾಮಂಟಪವನ್ನು ನಿವೃತ್ತ ಸೈನಿಕ ಆಯ್‌.ಜಿ.ಚಿಂದಿ ಅವರು ಉದ್ಘಾಟಿಸಿ, ದೇಶ ರಕ್ಷಣೆ ಮಾಡುತ್ತಿರುವ ಸೈನಿಕರನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಸೇನಾಮುಖ್ಯಸ್ಥ ರಾವತ್ ಅವರು ಸೇನಾ ಪಡೆಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು. 

ಪ್ರವಚನ ವಾಗ್ಮಿ ಡಾ.ಈಶ್ವರ ಮಂಟೂರ ಶರಣರ ವೇದಿಕೆಯನ್ನು ಶ್ರೀಗುರುಬಸವ ದೇವರು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ 15 ದಿನಗಳ ಕಾಲ ಪ್ರವಚನ ಸಾದರ ಪಡಿಸಿದ ಗುರುಬಸವ ದೇವರಿಗೆ ಹಾಗೂ ಸಂಸ್ಕೃತ ಶಿಬಿರ ನಡೆಸಿದ ಶಿವಶರಣ ದೇವರಿಗೆ ಗೌರವ ಸಮರೆ​‍್ಣ ಸಲ್ಲಿಸಲಾಯಿತು. 

ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು, ಶರಣ ಸಂಗಮ ಸ್ವಾಗತ ಸಮಿತಿ ಅಧ್ಯಕ್ಷ ನಾಗೇಶಪ್ಪ ಪಾಗಿ, ಮಲ್ಲೇಶಪ್ಪ ಬೆಣ್ಣಿ, ಜಿ.ಬಿ.ಹಲ್ಯಾಳ, ಡಾ.ಎಸ್‌.ವಿ.ಉದ್ನೂರ, ಮಲ್ಲಿಕಾರ್ಜುನ ರಾಜನಾಳ, ಸಂಗಪ್ಪ ಜವಳಿ ಸೇರಿದಂತೆ ಇತರರು ಇದ್ದರು.