ವಿಶ್ವ ಜನಸಂಖ್ಯಾ ದಿನಾಚರಣೆ: ಜನಸಂಖ್ಯೆ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ

ವಿಶ್ವ ಜನಸಂಖ್ಯಾ ದಿನಾಚರಣೆ: ಜನಸಂಖ್ಯೆ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ World Population Day: Community participation essential for population control

 ಕೊಪ್ಪಳ 15: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೌಳಬಜಾರ್ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು, ಜನಸಂಖ್ಯೆ ನಿಯಂತ್ರಣವು ಸರ್ಕಾರದ ಇಲಾಖೆಗಳ ಜವಾಬ್ದಾರಿಯಷ್ಟೇ ಅಲ್ಲ, ಸಮುದಾಯದ ಸಕ್ರಿಯ ಸಹಭಾಗಿತ್ವವೂ ಅತ್ಯಗತ್ಯ ಎಂದು ಹೇಳಿದರು.  

ದೇಶದ ಜನಸಂಖ್ಯೆ ಸುಮಾರು 147.6 ಕೋಟಿ ಹಾಗೂ ಕರ್ನಾಟಕದ ಜನಸಂಖ್ಯೆ 6.9 ಕೋಟಿಯನ್ನು ದಾಟಿರುವ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ಜನಸಂಖ್ಯೆಯಿಂದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಹಲವು ಸವಾಲುಗಳು ಎದುರಾಗುತ್ತಿವೆ. ಈ ಹಿನ್ನೆಲೆ ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಎರಡು ಮಕ್ಕಳ ನಡುವೆ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದುಕೊಂಡು ಸಣ್ಣ ಕುಟುಂಬದ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.  

ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ತಾತ್ಕಾಲಿಕ ಹಾಗೂ ಶಾಶ್ವತ ಕುಟುಂಬ ಯೋಜನಾ ವಿಧಾನಗಳ ಕುರಿತು ಮಾಹಿತಿ ನೀಡಿದ ಅವರು, ಮದುವೆಯ ನಂತರ ಗರ್ಭಧಾರಣೆಯನ್ನು ಮುಂದೂಡಲು ಮತ್ತು ಮಕ್ಕಳ ನಡುವಿನ ಅಂತರ ಕಾಯ್ದುಕೊಳ್ಳಲು ’ಮಾಲಾ’, ’ಛಾಯಾ’ ಮಾತ್ರೆಗಳು, ಪಿಪಿಐಯುಸಿಡಿ, ಐಯುಸಿಡಿ-375, ಐಯುಸಿಡಿ-380ಎ, ’ಅಂತರ’ ಗರ್ಭನಿರೋಧಕ ಚುಚ್ಚುಮದ್ದು ಹಾಗೂ ಪುರುಷರಿಗೆ ’ನಿರೋಧ್‌’ ಸೇವೆಗಳು ಲಭ್ಯವಿವೆ ಎಂದು ತಿಳಿಸಿದರು.  ಇನ್ನು ಕುಟುಂಬ ಪೂರ್ಣಗೊಂಡ ದಂಪತಿಗಳಿಗೆ ಮಹಿಳೆಯರಿಗೆ ಲ್ಯಾಪರೋಸ್ಕೋಪಿಕ್ ಮತ್ತು ಟ್ಯೂಬೆಕ್ಟಮಿ, ಪುರುಷರಿಗೆ ನೋ-ಸ್ಕಾಲ್ಪೆಲ್ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತಿದೆ ಎಂದರು.  

ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ವೀರೇಂದ್ರ ಕುಮಾರ್ ಮಾತನಾಡಿ, ಹೆಣ್ಣು ಮಗುವಿಗೆ ಸಮಾನ ಸ್ಥಾನಮಾನ ನೀಡುವುದು ದೇಶದ ಅಭಿವೃದ್ಧಿಗೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು. ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ’ಬೆಟಿ ಬಚಾವೋ ಹಿ ಬೆಟಿ ಪಡಾವೋ’ ಅಭಿಯಾನವನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ ಎಂದರು.  

ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಹಾಗೂ ಮಕ್ಕಳ ನಡುವಿನ ಸೂಕ್ತ ಅಂತರದಿಂದ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಉತ್ತಮಗೊಳಿಸುವುದರ ಜೊತೆಗೆ ಅನಗತ್ಯ ಗರ್ಭಧಾರಣೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಬಾಲ್ಯ ವಿವಾಹ ತಡೆ, ಮಹಿಳೆಯರಿಗೆ 18 ವರ್ಷ ಹಾಗೂ ಪುರುಷರಿಗೆ 21 ವರ್ಷ ನಂತರವೇ ವಿವಾಹ ಮತ್ತು ಕುಟುಂಬ ಯೋಜನೆ ಅಳವಡಿಸಿಕೊಳ್ಳುವ ಮಹತ್ವವನ್ನು ಅವರು ವಿವರಿಸಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಇಂದ್ರಾಣಿ ವಿ., ಆಡಳಿತ ವೈದ್ಯಾಧಿಕಾರಿ ಡಾ. ಭಾರತಿ, ರಾಜ್ಯ ಕನ್ಸಲ್ಟೆಂಟ್ ದೊಡ್ಡನಗೌಡ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗನ್ನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ, ಎಎಸ್‌ಒ ಮಹಾದೇವಿ, ಹಿರಿಯ ಸುರಕ್ಷತಾ ಅಧಿಕಾರಿ ಮೇರಿ, ಆರೋಗ್ಯ ನೀರೀಕ್ಷಕ ಅರುಣ್ ಕುಮಾರ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.