ಕಲೆ, ಸಂಸ್ಕೃತಿ, ಜಾನಪದ ಉಳಿವಿಗೆ ಮಹಿಳೆ ಕೊಡುಗೆಅಪಾರ: ಕವಿತಾ

ಹರಪನಹಳ್ಳಿ 13: ಕಲೆ, ಸಂಸ್ಕೃತಿ, ಜಾನಪದ ಇವುಗಳ ಉಳಿವಿಗೆ ದೇಶದ ಮಹಿಳೆ ಅಪಾರ ಕೊಡುಗೆ ನೀಡುತ್ತಿದ್ದಾಳೆ ಅದರೊಂದಿಗೆ ರಾಜಕೀಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ ಇಂದಿರಾಗಾಂಧಿ ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದೆಂದು ತೋರಿಸಿದ್ದಾರೆಂದು ಕೆಪಿಸಿಸಿ ಮಹಿಳಾ ಪ್ರದಾನ ಕಾರ್ಯದರ್ಶಿ ಕವಿತಾ ಹೇಳಿದರು.

    ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಎಂ.ಪಿ.ಪ್ರಕಾಶ ಸಮಾಜ ಮುಖಿ ಟ್ರಸ್ಟ್ ಸಹಯೋಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ, ರಸಪಶ್ನೆ, ಭಜನಾ ಮತ್ತು ಕೋಲಾಟ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಿಯ ಕಲೆಗಳನ್ನು ಪ್ರೋತ್ಸಾಹಿಸಿವುದರ ಜೊತೆ ಆಧುನಿಕ ತಂತ್ರಜ್ಞಾನದಲ್ಲೂ ಮಹಿಳೆಯ ಪಾತ್ರಕ್ಕೆ ಇಂಬುನಿಡುತ್ತಿರುವ ಎಂ.ಪಿ.ವೀಣಾ ಅವರನ್ನು ಅಭಿನಂದಿಸಬೇಕು ಎಂದರು.ಹೊಸಪೇಟೆ ಮಹಿಳಾ ಸಂಘಟನೆಯ ಭಾಗ್ಯಮ್ಮ ಮಾತನಾಡಿ, ಮಹಿಳಾ ದಿನಾಚರಣೆಗೆ ಸೀಮಿತವಾಗದೆ ಅವರ ಪ್ರಗತಿಗೆ ಕುಟುಂಬ ಸದಸ್ಯರು ಕೈಜೋಡಿಸಿದರೆ ಸ್ತ್ರೀ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಕೃಷಿ, ಕಾರ್ಮಿಕ, ನಾಟಕ, ಸಿನಿಮಾ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹಿಳೆ ಸಾಧನೆ ಮಾಡುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲೂ ಪ್ರಗತಿ ಸಾಧಿಸುತ್ತಿದ್ದಾರೆ. ಎಂ.ಪಿ.ವೀಣಾ ಮಹಂತೇಶ ರಾಜಕೀಯ ಹಾಗೂ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಎಂದರು.

    ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ, ಆಧುನಿಕ ಬದುಕಿಗೆ ಪುರಷರ ಜೊತೆ ಸರಿಸಮಾನಳಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಸಾಧನೆ ಮಾಡುತ್ತಾ ತಾನು ಅಬಲೆಯಲ್ಲಾ ಸಬಲೆ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾಳೆ. ಇಂದಿನ ಸನ್ಮಾನಿತರು ಕೃಷಿ, ಕಲೆ, ಸಾಮಾಜಿಕ ಸೇವೆ, ವೈದ್ಯಕೀಯ, ಕ್ರೀಡೆ, ರಂಗ ಕಲಾವಿದರು ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಹೆಮ್ಮೆಯಾಗಿದೆ ಎಂದರು. 

    ರಂಗ ಕಲಾವಿದೆ ನಾಗರತ್ನ ಸೋಗಿ, ಲಲಿತಮ್ಮ ಸಮಾಜ ಸೇವೆ, ರೇಖಮ್ಮ ರಾಜಕೀಯ, ಚೌಡಗರ ಅಕ್ಕಮ್ಮ ರೈತ ಮಹಿಳೆ, ಇಟ್ಟಿಗಿ ಭಾಗ್ಯಮ್ಮ ಕೂಲಿ ಕಾರ್ಮಿಕರು, ನಾಗಮ್ಮರ ಬಸಮ್ಮ ಸೈನಿಕರ ತಾಯಿ, ಅನಿತಾ ಸಕ್ರಪ್ಪನವರ ಕಬ್ಬಡಿ, ಕಾಳಮ್ಮ ವೈದ್ಯಕೀಯ ಸೇವೆ, ಸುಭದ್ರಮ್ಮ ಶೈಕ್ಷಣಿಕ, ಸರಸ್ವತಿ ಕ್ರೀಡೆ ಇನ್ನೂ ಹಲವರನ್ನು ಸನ್ಮಾನಿಸಲಾಯಿತ್ತು.ತಾಲ್ಲೂಕಿನ ಕಂಚಿಕೇರಿ, ವ್ಯಾಸನ ತಾಂಡ, ತೆಲಗಿ, ನೀಲಗುಂದ, ಕಲ್ಲಹಳ್ಳಿ, ಇನ್ನೂ ಹಲವಾರು ತಂಡಗಳು ಆಕರ್ಷಕ ಕೋಲಾಟ ಪ್ರದರ್ಶನದ ಸ್ಪರ್ದೆ, ರಸ ಪ್ರಶ್ನೆ ಹಾಗೂ ಭಾವಗೀತೆ ಸ್ಪರ್ದೆಗಳಿಂದ ಜನರನ್ನು ರಂಜಿಸಿ ದೇಶಿಯ ಕಲೆಗಳ ಮಹತ್ವ ಸಾರಿದರು. ಚಿತ್ರನಟಿ ಮಾನಸ, ಆಕಾಶವಾಣಿ ಕಲಾವಿದೆ ಪುಷ್ಪ, ಶಿಕ್ಷಕಿ ಮಮತ್ತಾಜ್, ಸುಭದ್ರಮ್ಮ, ಟುವ್ವಿ ಟುವ್ವಿ, ಡಾ.ಮಹಂತೇಶ ಚರಂತಿಮಠ ಹಾಗೂ ಇತರರು ಭಾಗವಹಿಸಿದ್ದರು.