ವಿಜ್ಞಾನ ಪ್ರಗತಿಯಿಂದ ಮನುಷ್ಯನ ದೈನಂದಿನ ರೀತಿ ನೀತಿಗಳು ಬದಲಾಗುತ್ತ ಸಾಗಿವೆ !

ಮಹಾಲಿಂಗಪುರದಲ್ಲಿ ಚನ್ನಗಿರಿಶ್ವರ ಪ್ರಾಸಾದಿಕ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರು ವಂದನ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮ. 

ಮಹಾಲಿಂಗಪುರ 15: ವಿಜ್ಞಾನ ಪ್ರಗತಿ ಹೊಂದಿದಂತೆ ಮನುಷ್ಯನ ದಿನ ನಿತ್ಯದ ಬದುಕಿನ ರೀತಿ ನೀತಿಗಳು ಸಹಿತ ಬದಲಾಗುತ್ತ ಸಾಗಿವೆ ಎಂದು ವಿಶ್ರಾಂತ ವಿಜ್ಞಾನ ಶಿಕ್ಷಕರು ಸಿ ಎಚ್‌. ಹುಕ್ಕೇರಿ ಹೇಳಿದರು. 

ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ರವಿವಾರ 1996-97ನೇ ಸಾಲಿನ ಚನ್ನಗಿರಿಶ್ವರ ಪ್ರಾಸಾದಿಕ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು, ಸ್ನೇಹ ಸಂಭ್ರಮ ಕಾರ್ಯಕ್ರಮ ಏರಿ​‍್ಡಸುವುದರೊಂದಿಗೆ ಕಲಿಸಿದ ಗುರುಗಳನ್ನು ಸತ್ಕರಿಸಿ ಗುರುವಂದನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತದಲ್ಲಿ ಓದ್ಯೋಗಿಕವಾಗಿ ಎಲ್ಲೆಂದರಲ್ಲಿ ಕಾರ್ಖಾನೆಗಳು ಹಾಗೂ ವಾಹನಗಳ ತ್ಯಾಜ್ಯಗಳಿಂದ ಸೇವಿಸುವ ಆಹಾರ, ನೀರು ಮತ್ತು ವಾಯುಗುಣ ಕಲುಷಿತಗೊಂಡು ನಮ್ಮ ಆರೋಗ್ಯ ಹದಗೆಡುತ್ತಿದೆ. ಆದಷ್ಟು ಶುದ್ಧ ನೀರು, ಆಹಾರ, ವಾಯುವಿನಿಂದ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ.ತಾವುಗಳು ಉತ್ತಮ ಬದುಕು ಸಾಗಿಸಲಿಕ್ಕೆ ಚಿಂತೆ ದೂರ ಮಾಡಿಕ್ಕೊಂಡು ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿ ಮನೋ ವೈಕಲ್ಯ ಹೊಡೆದೋಡಿಸಬೇಕು ಎಂದರು.. 

ನಿವೃತ್ತ ಪ್ರಾಚಾರ್ಯರಾದ ಎಂ ಹೆಚ್‌. ಕುಂಟೋಜಿ, ಎಸ್ ಬಿ ಹುಲಕುಂದ ಮಾತನಾಡಿ, ಜೀವನದುದ್ದಕ್ಕೂ ಶುಧ್ಧ ಶಾಖಾಹಾರವೇ ಇರಲಿ, ಮಿತ ಆಹಾರಿಯಾಗಿ ಬೇಗ ಮಲಗಿ ಮತ್ತು ಬೇಗ ಎದ್ದು, ವ್ಯಾಯಾಮ ಮಾಡಿ ಪ್ರತಿಯೊಬ್ಬರೂ ನಿರೋಗಿಯಾಗಿ ಉತ್ತಮ ಬದುಕು ಸಾಗಿಸಿ.ಆದಷ್ಟು ಬೇಕರಿ ಮತ್ತು ಜಂಕ್ ಫುಡ್ ಗಳಿಂದ ದೂರವಿರಲು ಪ್ರಯತ್ನಿಸಿ ಎಂದರು. 

ಪ್ರಾಸ್ತಾವಿಕವಾಗಿ ಮಹಾದೇವ ಪುಕಾಳೆ ಮಾತನಾಡಿ, ಶಿಕ್ಷಕ ಎಸ್ ಬಿ. ಮಠಗಾರ ಮಾತನಾಡಿದರು. ಶನಿವಾರ ಸಂಜೆ ಸಹಪಾಠಿಗಳೆಲ್ಲ ಗಾಯನ ಮಂಜರಿಯಲ್ಲಿಯೂ ತಲ್ಲಿನಗೊಂಡು ಸಖತ್ತ ಮಜಾ ಮಾಡಿದರು. ಭಾನುವಾರ ಮುಂಜಾನೆ ಗುರುಗಳನ್ನು ಸಕಲ ವಾದ್ಯಗಳೊಂದಿಗೆ ಪುಷ್ಪ ವೃಷ್ಟಿ ಮಾಡಿ ಹಳೆ ವಿದ್ಯಾರ್ಥಿಗಳೆಲ್ಲ ವೇದಿಕೆಗೆ ಕರೆ ತಂದರು.  

ಈ ಸಂದರ್ಭದಲ್ಲಿ ವಿದ್ಯಾರ್ಥಿ /ವಿದ್ಯಾರ್ಥಿನಿಯರು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕುವಾಗ ಸಹಪಾಠಿಗಳೆಲ್ಲ ಭಾವುಕರಾದರು. 27 ವರ್ಷಗಳ ಹಿಂದೆ ಅಗಲಿದ ಮನಗಳು ಒಂದೇ ವೇದಿಕೆಯಡಿ ಸೇರಿದಾಗ ಒಬ್ಬರನ್ನೊಬ್ಬರು ಆಲಿಂಗನ ಮಾಡಿಕ್ಕೊಳ್ಳುವುದು ಮತ್ತು ಹಳೆ ನೆನಪುಗಳನ್ನು ಕೆದಕಿ ಭಾವುಕರಾಗುತ್ತಿರುವುದು ಅಲ್ಲಲ್ಲಿ ಕಂಡು ಬಂತು. 

ಮಧ್ಯಾಹ್ನವಾಗುತ್ತಲೆ ಭೂರಿ ಭೋಜನ ಸವಿದು ಅಂದಾಜು 250 ಸಹಪಾಠಿಗಳೆಲ್ಲರೂ ವಿಡಿಯೋ, ಫೋಟೋ ಶೂಟ್ ಮಾಡಿಕ್ಕೊಂಡು ಮರೆವಿನ ಅಂಚಿನಲ್ಲಿ ಮತ್ತೊಮ್ಮೆ ಇತಿಹಾಸದ ಪುಟಗಳನ್ನು ತೆರೆದರು.ಸಂಜೆ ಮತ್ತೆ ಅಗಲಿಕೆ ಹೊತ್ತಿಗೆ ಹೃದಯ ಭಾರವಾಗತೊಡಗಿ ಒಲ್ಲದ ಮನಸ್ಸಿನಿಂದ ಮನೆಗಳತ್ತ ಹೆಜ್ಜೆ ಹಾಕಿದರು. 

ಈ ಸಂದರ್ಭದಲ್ಲಿ ವೇದಿಕೆ ಮೇಲೆ ವಿಶ್ರಾಂತ ಶಿಕ್ಷಕರಾದ ಬಿ ಜಿ ಬಿರಾದಾರ, ಎಂ ಆಯ್ ಡಾಂಗೆ, ಬಿ ಎನ್ ಅರಕೇರಿ, ಜಿ ಜಿ ಸೊನ್ನದ, ಎಸ್ ಬಿ ಕೋರಿಶೆಟ್ಟಿ, ಬಿ ಡಿ.ಗೋಕಾಕ, ಎಚ್ ಟಿ.ಅಮಲ್ಜೇರಿ, ಎಸ್ ಸಿ. ಹಿರೇಮಠ, ಹಳೆ ವಿದ್ಯಾರ್ಥಿಗಳಾದ ಶಂಭು ಬಡಿಗೇರ, ಅನಿಲ ಉಳ್ಳಾಗಡ್ಡಿ, ಶ್ರೀಶೈಲ ಕಾರಜೋಳ, ನಿಂಗಪ್ಪ ಬಾಳಿಕಾಯಿ, ಪ್ರಕಾಶ ನುಚ್ಚಿ, ಈರಣ್ಣ ನಕಾತಿ, ಸುರೇಶ್ ಕಳ್ಯಾಗೋಳ, ಶಂಕರ ಕಾಂಬ್ಳೇಕರ, ವಿರೇಶ ಮುಂಡಗನೂರ, ಶ್ರೀಶೈಲ ಹುನಿಶ್ಯಾಳ, ಷಪಿವುಲ್ಲಾ ಕೋಲಾರ, ಉಮರಲಿ ಕರಡಿ, ಲಕ್ಷ್ಮಿ ಗೋಲಭಾವಿ, ಸುಮಾ ಸಂಕ್ರಾವತ, ಸಂಗೀತಾ ಬಡಿಗೇರ, ರೂಪಾ ಪಾಟೀಲ್, ಸವಿತಾ ಜೀರಗಾಳ, ರೋಹಿಣಿ ಸುಣದೋಳಿ, ಸವಿತಾ ಕಂಕಣವಾಡಿ ಮುಂತಾದವರಿದ್ದರು. ವಿಶೇಷ ನಿರೂಪಣೆ ಶೃತಿ ಗೋಕಾಕ.