ನವಲಗುಂದ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದ ನೀರು

ನವಲಗುಂದ : ನವಲಗುಂದ ತಾಲ್ಲೂಕಿನ ಮೊರಬ ಗ್ರಾಮಕ್ಕೆ ತುಪ್ಪರಿಹಳ್ಳ ಹೊರಚೆಲ್ಲ ಗ್ರಾಮದ ಅಂಬೇಡ್ಕರ ನಗರ ಇತರೇ ಪ್ರದೇಶಗಳಿಗೆ ನೀರು ನುಗ್ಗಿದ್ದು ನೀರು ಹೊರಹಾಕಲು ನಿವಾಸಿಗಳು ಕಷ್ಟಪಡುತ್ತಿದ್ದಾರೆ. ನಿವಾಸಿಗಳು ಪ್ರತಿಭಟನೆ ಮಾಡಿ ಮನೆಗಳನ್ನು ಸ್ಥಳಾಂತರಿಸಿ 2019 ರಲ್ಲಿ ಸಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲು ನವಲಗುಂದ ಮಾಜಿ ಶಾಸಕ ಎನ್‌.ಹೆಚ್‌. ಕೋನರಡ್ಡಿ 10 ಎಕರೆ ಜಮೀನು ಖರಿದಿಸಲು ನಿರ್ಧರಿಸಿದ ಪ್ರವಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಬೇಕೆಂದು ಒತ್ತಾಯಿಸಿದರು. 

ಅವರು ಇಂದು ಮೊರಬ ಗ್ರಾಮದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು ತುಪ್ಪರಿಹಳ್ಳದಿಂದ ಅಕ್ಕಪಕ್ಕ ಇರತಕ್ಕಂತಹ ಮೊರಬ, ಗುಮ್ಮಗೋಳ, ಶಿರೂರ, ಹಣಸಿ, ಶಿರಕೋಳ, ಬಳ್ಳೂರ ಹಾಗೂ ಹೆಬ್ಬಾಳ, ಅಳಗವಾಡಿ ಗ್ರಾಮಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ ಎಂದರು. ಅಳಗವಾಡಿ ಹತ್ತಿರ ಪಂಪಹೌಸ್‌ನಲ್ಲಿ ಸಿಕಲುಕಿಕೊಂಡ ರೈತ ಸೋಮಪ್ಪ ರಂಗಣ್ಣವರ ಅಗ್ನಿಶಾಮಕ ದಳದವರು ಕಾಪಾಡಿದ್ದಾರೆ. ಹಳ್ಳಕ್ಕೆ ರೈತರ ಪಂಚಪಸೆಟಗಳು, ಪೈಪಗಳು, ಕೃಷಿ ಸಲಕರಣೆಗಳು ನೀರಿಗೆ ಕೊಚ್ಚಿಹೋಗಿವೆ. ರೈತರು ಬೆಳೆದ ಹತ್ತಿ, ಉಳ್ಳಾಗಡ್ಡಿ, ಮೆಣಸಿನಕಾಯಿ, ಶೇಂಗಾ ಮುಂತಾದ ಬೆಳೆಗಳು ಹಾನಿಯಾಗಿವೆ. ತುಪ್ಪರಿಹಳ್ಳ ಪ್ರವಾಹದಿಂದ ಮೊರಬ-ಗುಮ್ಮಗೋಳ ರಸ್ತೆ ಹಾಗೂ ಶಿರಕೋಳ-ಹಣಸಿ, ಬಳ್ಳುರ-ಜಾವೂರ ರಸ್ತೆ ಸಂಪರ್ಕವೆ ಸ್ಥಗಿತಗೊಂಡಿದೆ. ಕೂಡಲೇ ಮನೆಯಲ್ಲಿ ನೀರು ನುಗ್ಗಿದವರಿಗೆ ಕಿರಾಣಿ ಹಾಗೂ ಭಾಂಡೆ ಖರೀದಿಸಲು ರೂ. 10 ಸಾವಿರ, ಮನೆ ಬಿದ್ದವಿಗೆ ರೂ. 5 ಲಕ್ಷ ಪರಿಹಾರ, ಪ್ರತಿ ರೈತರಿಗೆ ರೂ. 50 ಸಾವಿರ ತಕ್ಷಣ ಪರಿಹಾರನೀಡಬೇಕೆಂದು ಎನ್‌.ಹೆಚ್‌. ಕೋನರಡ್ಡಿ ಅವರು ಸರ್ಕಾರಕ್ಕೆ ಒತ್ತಾಯಿಸಿದರು.