ಜಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ಶಿವಾನಂದ ಜುಮನಾಳ

ಜಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ಶಿವಾನಂದ ಜುಮನಾಳ  Water conservation is everyone's responsibility: Shivananda Jumanala


ತಾಳಿಕೋಟೆ 02 : ನೀರು ಭೂಮಿಯ ಮೇಲಿನ ಅತ್ಯಂತ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಜಲವೇ ಜೀವವಾಗಿದೆ. ಆದ್ದರಿಂದ ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಾಳಿಕೋಟೆ ಪುರಸಭೆಯ ಕಿರಿಯ ಆರೋಗ್ಯ ನೀರೀಕ್ಷಕ ಶಿವಾನಂದ ಜುಮನಾಳ ಹೇಳಿದರು.  

ಪಟ್ಟಣದ ಎಸ್‌.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ತಾಳಿಕೋಟೆ ಪುರಸಭೆ ಮತ್ತು ಎನ್ಸಿಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ  ಹಿ2026" ಮಳೆನೀರು ಸಂಗ್ರಹಣೆ, ಘನ ತ್ಯಾಜ್ಯ ನಿರ್ವಹಣೆ ಹಾಗೂ ಜಲ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.  

ಪಟ್ಟಣದ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಬೇಕು. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯ ಮತ್ತು ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.

ಮಳೆನೀರು ಸಂಗ್ರಹಣೆಯ ವಿಧಾನಗಳು, ಘನ ತ್ಯಾಜ್ಯದ ವಿಂಗಡಣೆ, ಮರುಬಳಕೆ, ಸ್ವಚ್ಛತೆ ಹಾಗೂ ಅತಿಸಾರ (ಡಯೋರಿಯಾ) ನಿಯಂತ್ರಣಕ್ಕೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಯಾನಂದ ಮುಗಡ್ಲಿಮಠ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಜಾಗೃತಿ ಬೆಳೆಸಿಕೊಂಡು ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.  

ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ರಾಘವೇಂದ್ರ ಮಿಸ್ಕಿನ್ ಅವರ ಸಂಯೋಜನೆಯಲ್ಲಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಜಲ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಪ್ರತಿಜ್ಞೆ ಸ್ವೀಕರಿಸಿದರು.  

ಕಾರ್ಯಕ್ರಮದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನೀರೀಕ್ಷಕ ಫಿರೋಜ್ ಮುಲ್ಲಾ, ಉಪನ್ಯಾಸಕರು, ಎನ್ಸಿಸಿ ಕೆಡೆಟ್ಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. "ನೀರು ಉಳಿಸಿ ಹಿ ಪ್ರಕೃತಿಯನ್ನು ಬೆಳೆಸಿ" ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.