ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಮ್ಮ ಕರ್ತವ್ಯ : ವಿಶ್ವನಾಥ ಹೊಸಮನಿ

ಮುಂಡರಗಿ 26: ಸಂವಿಧಾನ ನೀಡಿರುವ ಹಕ್ಕಾದ ಮತದಾನವನ್ನು ಮೇ 7ರ ಲೋಕಸಭೆ ಚುನಾವಣೆಯಲ್ಲಿ ಸೂಕ್ತವೆನಿಸಿದ ಅಭ್ಯರ್ಥಿಗೆ ತಪ್ಪದೇ ಚಲಾಯಿಸುವ ಮೂಲಕ ಜವಾಬ್ದಾರಿ ಮೆರೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರಾದ ನಮ್ಮ ಕರ್ತವ್ಯ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಹೇಳಿದರು.   

ತಾಪಂ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಡ್ಡಾಯ ಮತದಾನಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರ ಕಾಲ್ನಡಿಗೆ ಜಾಥಾ ಹಾಗೂ  ಕಡಿಮೆ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಯ ಮನೆ ಮನೆ ಭೇಟಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಕಳೆದ ಚುನಾವಣೆಯಲ್ಲಿ ತಾಲೂಕಿನ ಪಟ್ಟಣದ ಮೇನ್ ಬಜಾರ್, ಕೋಟೆಭಾಗದಲ್ಲಿ ಕಡಿಮೆ ಮತದಾನವಾಗಿದ್ದು, ಈ ಪ್ರದೇಶಗಳಲ್ಲಿ ಈ ಸಾರಿ ನೂರಕ್ಕೆ ನೂರರಷ್ಟು ಮತದಾನವಾಗಬೇಕು. ಅದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಕಾಲ್ನಡಿಗೆ ಜಾಥಾ ಹಾಗೂ ಮನೆ ಮನೆ ಭೇಟಿ ನೀಡುವ ಮೂಲಕ ಎಲ್ಲರೂ ತಪ್ಪದೇ ಮತ ನೀಡುವಂತೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.  

ಪಟ್ಟಣದ ತಾಲೂಕು ಪಂಚಾಯತ ಆವರಣದಿಂದ ಆರಂಭವಾದ ಕಾಲ್ನಡಿಗೆ ಜಾಗೃತಿ ಜಾಥಾ ಕಡ್ಡಾಯ ಮತದಾನದ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸುವ ಮೂಲಕ ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಪ್ರದೇಶದ ಜನರನ್ನು ಭೇಟಿ ಮಾಡಿ ಮತದಾನದ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸಿದರು. ನಂತರ ಮೇನ್ ಬಜಾರ್ ಮೂಲಕ ಕಡ್ಡಾಯ ಮತದಾನದ ಘೋಷಣೆಗಳನ್ನು ಕೂಗುತ್ತ ಸಾಗಿದ ಜಾಥಾ ಕೋಟೆ ಭಾಗದ ಮನೆ ಮನೆಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ಓಟ್ ಹಾಕುವಂತೆ ಮತದಾನದ ಮಹತ್ವದ ಕುರಿತು ತಿಳುವಳಿಕೆ ಮೂಡಿಸಲಾಯಿತು.. ಮಾನವ ಸರಪಳಿ ನಿರ್ಮಿಸುವ ಮೂಲಕ ಕಡ್ಡಾಯ ಮತದಾನಕ್ಕೆ ಘೋಷಣೆಗಳ ಮೂಲಕ ಕರೆ ನೀಡಿದರು.  

ಜಾಥಾದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರು ಕೈಯಲ್ಲಿ ಕಡ್ಡಾಯ ಮತದಾನದ ಘೋಷವಾಕ್ಯದ ಪ್ಲೇ ಕಾರ್ಡ್‌ ಗಳನ್ನು ಹಿಡಿದು ಪಾಲ್ಗೊಂಡಿದ್ದು ಕಡ್ಡಾಯವಾಗಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಪ್ರೇರೇಪಿಸುವಂತಿದ್ದವು.  

ಈ ವೇಳೆ ಸಹಾಯಕ ನಿರ್ದೇಶಕ (ಪಂ.ರಾಜ್) ಪ್ರವೀಣ ಗೋಣೆಮ್ಮನವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪದ್ಮಾವತಿ ಗೋವಿಂದರೆಡ್ಡಿ, ಎಸ್ ಎಸ್ ಹಾದಿಮನಿ, ತಾಪಂ ವ್ಯವಸ್ಥಾಪಕ ಫಕ್ರುದ್ದೀನ್ ನಧಾಪ, ಪಿಡಿಓ ಸಂತೋಷ ನಾಯಕ, ತಾಪಂ ಸಿಬ್ಬಂದಿಗಳಾದ ಶಾಬುದ್ದೀನ್ ನಧಾಪ, ಸಿದ್ದು ಮಡಿವಾಳರ, ಶರಣಪ್ಪ ಇತರರಿದ್ದರು