ಮತ ಚಲಾವಣೆಯು ನಮ್ಮ ಕರ್ತವ್ಯ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ

ಬಳ್ಳಾರಿ, 19:  ಸಂವಿಧಾನವು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕನ್ನು ನೀಡಿದೆ. ಪ್ರತಿಯೊಬ್ಬ ಅರ್ಹ ಮತದಾರರು ಮತ ಚಲಾವಣೆ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಆಗಿರುವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು  ಹೇಳಿದರು. 

ಬಳ್ಳಾರಿ ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ವಿಕಲಚೇತನರ ಇಲಾಖೆ, ಜಿಲ್ಲಾ ಪುನರ್ವಸತಿ ಕೇಂದ್ರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಎಂಆರ್‌ಡಬ್ಲ್ಯೂ, ವಿಆರ್‌ಡಬ್ಲ್ಯೂ, ಯುಆರ್‌ಡಬ್ಲ್ಯೂ ಕಾರ್ಯಕರ್ತರು ಹಾಗೂ ವಿಶೇಷಚೇತನರಿಂದ ಶುಕ್ರವಾರ ನಗರದ ದುರುಗಮ್ಮ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯ ಮೂಲಕ ಮತದಾನ ಜಾಗೃತಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಅವರು ಮಾತನಾಡಿದರು. 

ವಿಶೇಷ ಚೇತನರು, ಹಿರಿಯ ನಾಗರಿಕರಿಗಾಗಿಯೇ ಮತಗಟ್ಟೆಗಳಲ್ಲಿ ರಾ​‍್ಯಂಪ್, ವೀಲ್‌ಚೇರ್, ನೆರಳು, ನೀರಿನ ವ್ಯವಸ್ಥೆ ಸೇರಿ ಇತರೆ ಅನುಕೂಲಗಳು ಇರಲಿದ್ದು, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಕರೆ ನೀಡಿದರು. 

ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮತದಾರರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. 

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್ ಸಾಬ್, ಮಹಾನಗರ ಪಾಲಿಕೆಯ ಯೋಜನಾ ವ್ಯವಸ್ಥಾಪಕ ದೇವರಾಜ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ, ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರುಗಳು ಹಾಗೂ ವಿಶೇಷಚೇತನರು, ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ವಿಶೇಷಚೇತನರು ತಮ್ಮ ತಮ್ಮ ಯಂತ್ರಚಾಲಿತ ತ್ರಿಚಕ್ರ ವಾಹನಗಳಲ್ಲಿ ಮತದಾನದ ಅರಿವು ಮೂಡಿಸುವ ಘೋಷಣೆ ಕೂಗುತ್ತಾ ಮತದಾರರಲ್ಲಿ ಅರಿವು ಮೂಡಿಸಿದರು. 

ವಿಶೇಷಚೇತನರ ಬೈಕ್ ರ್ಯಾಲಿಯ ಮತದಾನ ಜಾಗೃತಿ ಜಾಥಾವು ಕನಕದುರ್ಗಮ್ಮ ದೇವಸ್ಥಾನ ಆವರಣದಿಂದ ಆರಂಭವಾಗಿ ಎಸ್‌ಪಿ ವೃತ್ತ ಮಾರ್ಗವಾಗಿ ಓಪಿಡಿ ವೃತ್ತ, ಹೆಚ್‌.ಆರ್‌.ಗವಿಯಪ್ಪ ವೃತ್ತದ ಮಾರ್ಗವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಮರಳಿ ದುರ್ಗಮ್ಮ ದೇವಸ್ಥಾನದ ಆವರಣಕ್ಕೆ ತಲುಪಿ ಅಂತ್ಯಗೊಂಡಿತು.