ಮದುವೆ ಸಮಾರಂಭದಲ್ಲಿ ಮತದಾನ ಜಾಗೃತಿ

ಕೊಪ್ಪಳ, ಏಪ್ರಿಲ್ 23: ಮೇ-7ರಂದು ಲೋಕಸಭಾ ಚುನಾವಣೆ ಜರುಗಲಿರುವ ಪ್ರಯುಕ್ತ ಕೊಪ್ಪಳ ತಾಲೂಕ ಸ್ವೀಪ್ ಸಮಿತಿಯಿಂದ ಸೋಮವಾರದಂದು ಭಾಗ್ಯನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಭಾಗ್ಯನಗರ ಪಟ್ಟಣದ ಸಸಿಮಠ ಕುಟುಂಬದ ಸಿದ್ದಾರ್ಥಸ್ವಾಮಿ ಹಾಗು ರೋಹಿಣಿ ಇವರ ವಿವಾಹ ಸಮಾರಂಭದಲ್ಲಿ ಮತದಾನ ಜಾಗೃತಿಯನ್ನು ಮೂಡಿಸಲಾಯಿತು. 

ವಿವಾಹ ಸಮಾರಂಭದಲ್ಲಿ ಹಾಜರಿದ್ದ ನವ ವಧು-ವರರು ವೇದಿಕೆಯಲ್ಲಿ ನಮ್ಮ ಮತ, ನಮ್ಮ ಹಕ್ಕು, ಪ್ರತಿ ಮತ ಅತ್ಯಮೂಲ್ಯ ತಪ್ಪದೇ ಮತದಾನ ಮಾಡಿ, ನನ್ನ ಮತ ಮಾರಾಟಕ್ಕಿಲ್ಲ, ಮತ ಚಲಾಯಿಸೋಣ ಪ್ರಜಾಪ್ರಭುತ್ವ ಗಟ್ಟಿಗೊಳಿಸೋಣ ಇತ್ಯಾದಿ ಸ್ಲೋಗನ್‌ಗಳನ್ನು ಒಳಗೊಂಡ ಬಟಿಂಗ್ಸ್‌ ಮೂಲಕ ನವ ವಧು-ವರರು ಮತದಾನ ಜಾಗೃತಿ ಮೂಡಿಸಿದ್ದು ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ಖುಷಿ ನೀಡಿತು. 

ಕಾರ್ಯಕ್ರಮದಲ್ಲಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಹಾಯಕ ಕಾರ್ಯದರ್ಶಿಗಳಾದ ಶಿವಪ್ಪ ಸುಬೇದಾರ್ ರವರು ನವ ವಧು ವರರಿಗೆ ಅಕ್ಷತೆ ಹಾಕುವುದರ ಮೂಲಕ ಶುಭ ಹಾರೈಸಿದರು. ಕಡ್ಡಾಯವಾಗಿ ಮೇ-7ರಂದು ತಪ್ಪದೇ ಮತ ಚಲಾಯಿಸಿರೆಂದು ಸಸಿಮಠ ಕುಟುಂಬದವರಿಗೆ ಹಾಗು ಹಾಜರಿದ್ದವರಿಗೆ ಕರೆ ನೀಡಿದರು.  

ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಫೋಟೋ ತೆಗೆಸಿಕೊಂಡ ವಧು-ವರರು: ತಾಲೂಕ ಪಂಚಾಯತಿ ವತಿಯಿಂದ ಸಿದ್ದಪಡಿಸಲಾದ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸೆಲ್ಫಿ ಸ್ಟ್ಯಾಂಡ್‌ನಲ್ಲಿ ನವ ವಧು ವರರು ಮತದಾನ ಮಾಡುವ ಕುರಿತು  ಫೋಟೋ ತೆಗೆಸಿಕೊಂಡರು. 

ಜಿಲ್ಲಾ ಪಂಚಾಯತ ಆಡಳಿತ ಸಹಾಯಕ ನಿರ್ದೇಶಕರಾದ ಎಸ್‌.ಆರ್‌.ಪೂಜಾರ, ತಾಲೂಕ ಪಂಚಾಯತಿಯ ಯೋಜನಾಧಿಕಾರಿ ರಾಜೇಸಾಬ ನದಾಫ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಸ್ವೀಪ್ ಸಮಿತಿಯ ಸದಸ್ಯರಾದ ಬಸವರಾಜ ಬಳಿಗಾರ, ದೇವರಾಜ ಪತ್ತಾರ, ಜಿಲ್ಲಾ ಪಂಚಾಯತ ಸಿಬ್ಬಂದಿಗಳು, ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ತಾಲೂಕ ಪಂಚಾಯತಿ ಸಿಬ್ಬಂದಿಗಳು ಹಾಗು ಇನ್ನಿತರರು ಹಾಜರಿದ್ದರು.