ಮತದಾರ ಬಾಂಧವರು ನನ್ನ ಆಯ್ಕೆಗೆ ನಿಶ್ಚಿತವಾಗಿಯೂ ಸಹಕರಿಸುತ್ತಾರೆ: ಜೊಲ್ಲೆ

ಅಥಣಿ 19: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ  ನನ್ನ ಅಧಿಕಾರವಧಿಯಲ್ಲಿ ಅನುಷ್ಠಾನ ಗೊಳಿಸಿದ  ಜನಪರ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರ ಬಾಂಧವರು ಎರಡನೇ ಬಾರಿ ನನ್ನ ಆಯ್ಕೆಗೆ ನಿಶ್ಚಿತವಾಗಿಯೂ ಸಹಕರಿಸುತ್ತಾರೆ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದರು.           

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಕಳೆದ ಬಾರಿ ನಾನು ಮೊದಲ ಬಾರಿಗೆ ಸಂಸದನಾಗಿ ಆಯ್ಕೆಯಾದಾಗ ಇಡೀ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಥಣಿ ಮತಕ್ಷೇತ್ರದಿಂದಲೇ ಅತೀ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದು, ಈ ಬಾರಿಯೂ ಸಹ ಅಥಣಿ ಮತಕ್ಷೇತ್ರದ ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಸಂಸದನಾಗಿ ಐದು ವರ್ಷಗಳ  ಅವಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಅವಧಿ ಕರೋನಾ ಮತ್ತು ಪ್ರವಾಹದಂತಹ ಸಮಸ್ಯೆಗೆ ಮೀಸಲಿಡಬೇಕಾಯಿತು ಇನ್ನುಳಿದ ಅವಧಿಯಲ್ಲಿ ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಿರುವೆ ಎಂದ ಅವರು ಅಥಣಿ ಕ್ಷೇತ್ರದಲ್ಲಿ ಪಿ.ಎಮ್‌.ಜಿ.ಎಸ್‌.ವೈ ಯೋಜನೆಯಡಿ 25 ಕೋಟಿ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ, ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಸಂಸದ ನಿಧಿಯಲ್ಲಿ 2 ಕೋಟಿ 97 ಲಕ್ಷ ರೂ.ಅನುದಾನದಲ್ಲಿ ಅಂಬ್ಯುಲೆನ್ಸ, ಸಿಸಿ ಕ್ಯಾಮರಾ ಅಳವಡಿಕೆ, ಬಸ್ ಶೆಲ್ಟರ್, ಸಮುದಾಯ ಭವನಗಳನ್ನು ನಿರ್ಮಾಣಗೊಳಿಸಲಾಗಿದೆ ಎಂದರು. ಅಥಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ 4480 ಕೋಟಿ ಅನುದಾನ ಮಂಜೂರು ಮಾಡಿಸಿರುವೆ ಅಲ್ಲದೆ ಕೆ.ಎನ್‌.ಎನ್ ಮೂಲಕ ಝುಂಜರವಾಡದಲ್ಲಿ 1 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿ ಕೈ ಗೊಂಡಿರುವೆ ಎಂದ ಅವರು ನನ್ನ ಧರ್ಮ ಪತ್ನಿ ಶಶಿಕಲಾ ಜೊಲ್ಲೆಯವರು ರಾಜ್ಯ ಸರಕಾರದಲ್ಲಿ ಮುಜರಾಯಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಅಥಣಿ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.         ದೇಶದ ಮತದಾರರು ಮೋದಿ ಗ್ಯಾರಂಟಿ ಮೇಲೆ ವಿಶ್ಚಾಸ ಇಟ್ಟಿದ್ದರಿಂದ ದೇಶದಲ್ಲಿ ಮೂರನೇ ಬಾರಿಯೂ ಸಹ ನರೇಂದ್ರ ಮೋದಿಯವರೇ ಪ್ರಧಾನಿಗಳಾಗುತ್ತಾರೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದ ಅವರು 10 ವರ್ಷಗಳ ಅವರ ಅವಧಿಯಲ್ಲಿ 500 ವರ್ಷಗಳಿಂದ ಸಾಧ್ಯವಾಗದ ರಾಮ ಮಂದಿರದ ನಿರ್ಮಾಣ, 75 ವರ್ಷಗಳಿಂದ ಸಾಧ್ಯವಾಗದ ಅನುಚ್ಛೇದ 370 ಕಲಂ ರದ್ದತಿ ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡ, ಅಲ್ಪ ಸಂಖ್ಯಾತ,  ರೈತ, ಬಡ, ನಿರ್ಗತಿಕರ, ವಿದ್ಯಾರ್ಥಿಗಳ, ಮಹಿಳೆಯರ, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರ ಅನಕೂಲಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತಿದ್ದು, ಈ ಬಾರಿಯೂ ದೇಶದಲ್ಲಿ 400 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ವಿಧಾನ ಸಭಾ ಕ್ಷೇತ್ರಗಳ ಪ್ರಮುಖರಿಗೆ, ಮಠಾಧೀಶರಿಗೆ, ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಭೇಟಿ ಮಾಡಿ ಚರ್ಚಿಸಿದ ನಂತರ ಎರಡನೇ ಅವಧಿಯಲ್ಲಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿಯೂ ಮನೆ ಮನೆ ಭೇಟಿ ಮಾಡಿ ಚರ್ಚಿಸುವೆ ಎಂದು ಹೇಳಿದರು.         

ಈ ಸಂದರ್ಭದಲ್ಲಿ ಧುರೀಣರಾದ ಅಪ್ಪಾಸಾಹೇಬ ಅವತಾಡೆ, ರಮೇಶ ಪಾಟೀಲ, ಗೀರೀಶ ಬುಟಾಳಿ, ಬಾಳಾಸಾಹೇಬ ಪಾಟೀಲ, ಮಲ್ಲಪ್ಪ ಹಂಚಿನಾಳ, ಅಣ್ಣಾಸಾಹೇಬ ನಾಯಿಕ, ಸಂತೋಷ ಕಕಮರಿ, ಅಣ್ಣಪ್ಪಾ ಹಳ್ಳೂರ, ಡಾ.ಭರತ್ ಲೋಣಾರಿ, ಸದಾಶಿವ ಕೊಂಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.