ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಿ

ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಿ Voters should verify their names on the voters' list

ಲೋಕದರ್ಶನ ವರದಿ 

ಧಾರವಾಡ ಸೆ.24: ಎಲ್ಲಾ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ಹೇಳಿದರು. ಅವರು ಇಂದು (ಸೆ.24) ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಆಯೋಜಿಸಿದ್ದ ಎಸ್‌ಐಆರ್ ಕುರಿತು ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.  

ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2026ರ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಸೆಪ್ಟೆಂಬರ್ 19 ಮತ್ತು 20, 2026 ರಂದು ಮತದಾರರ ನೋಂದಣಿ ಕುರಿತು ವಿಶೇಷ ಆಂದೋಲನವನ್ನು ಜರುಗಿಸಲಾಗಿತ್ತು, ಸಪ್ಟೆಂಬರ್ 20, 2026 ರಂದು ನಡೆದ ಆಂದೋಲನದಲ್ಲಿ ನಮೂನೆ-6 ರಲ್ಲಿ ಒಟ್ಟು 1490, ನಮೂನೆ 6ಎ ರಲ್ಲಿ ಒಟ್ಟು 21, ನಮೂನೆ 7ರಲ್ಲಿ ಒಟ್ಟು 38 ಹಾಗೂ ನಮೂನೆ 8 ರಲ್ಲಿ ಒಟ್ಟು 765 ಅರ್ಜಿಗಳು ಸ್ವೀಕೃತವಾಗಿವೆ ಎಂದು ತಿಳಿಸಿದರು. 

ವಿಶೇಷ ಆಂದೋಲನದಲ್ಲಿ ಒಟ್ಟಾರೆಯಾಗಿ ನಮೂನೆ-6 ರಲ್ಲಿ ಒಟ್ಟು 5,324, ನಮೂನೆ 6ಎ ರಲ್ಲಿ ಒಟ್ಟು 26, ನಮೂನೆ 7 ರಲ್ಲಿ ಒಟ್ಟು 98 ಹಾಗೂ ನಮೂನೆ 8 ರಲ್ಲಿ ಒಟ್ಟು 2,124 ಅರ್ಜಿಗಳು ಸ್ವೀಕೃತವಾಗಿವೆ ಎಂದು ತಿಳಿಸಿದರು.  

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಡಿ ಜಿಲ್ಲೆಯಲ್ಲಿ ಇದುವರೆಗೆ 47,937 ನೋಟಿಸ್‌ಗಳನ್ನು ಜನರೇಟ್ ಮಾಡಲಾಗಿದ್ದು, ಅವುಗಳಲ್ಲಿ 47,919 ನೋಟಿಸ್‌ಗಳನ್ನು ಸಾರ್ವಜನಿಕರಿಗೆ ತಲುಪಿಸಲಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ನೋಟಿಸ್ ಪಡೆದವರಲ್ಲಿ 32,018 ಮತದಾರರ ಹಿಯರಿಂಗ್ ಪೂರ್ಣಗೊಂಡಿದೆ. 9,114 ಮತದಾರರು ಹಿಯರಿಂಗ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರಿಗೆ ಎರಡನೇ ಅವಕಾಶ ನೀಡಲಾಗುತ್ತಿದ್ದು, ಅಗತ್ಯ ದಾಖಲೆಗಳನ್ನು ಸಲ್ಲಿಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು. 

ಇದಲ್ಲದೆ, 6,549 ಪ್ರಕರಣಗಳನ್ನು ಬಾಕಿ ಇದ್ದು, 21,786 ಅರ್ಜಿಗಳನ್ನು ಅಂತಿಮ ನಿಯಮ ಪ್ರಕ್ರಿಯೆಗೆ ಕಳುಹಿಸಲಾಗಿದೆ. ಹಾಗೂ ಅಂತಿಮ ಪ್ರಕಟಣೆಗಾಗಿ ಒಟ್ಟು 11,80,631 ಮತದಾರರ ವಿವರಗಳನ್ನು  ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. 

ಮತದಾರರ ಪಟ್ಟಿಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳ (ಂಇಖಓ) ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಈ ಹಿಂದೆ 67 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರೆ, ಪ್ರಸ್ತುತ ಹೆಚ್ಚುವರಿ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು ಸೇರಿದಂತೆ ಒಟ್ಟು 78 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 

ಈ ಅಧಿಕಾರಿಗಳು ತಾಲೂಕು ಹಾಗೂ ನಗರ ವಾರ್ಡ್‌ ಮಟ್ಟದಲ್ಲಿ ಲಭ್ಯವಿದ್ದು, ಮತದಾರರ ಹೆಸರು ಸೇರೆ​‍್ಡ, ತಿದ್ದುಪಡಿ, ಅಳಿಸುವಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.  

ಪತ್ರಿಕಾಗೋಷ್ಠಿಯ ನಂತರ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆ ಜರುಗಿಸಿ, ಮಾತನಾಡಿದರು.  ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಪ್ರಭಾವತಿ ಪಕೀರಪುರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಸಂಬಂಧಪಟ್ಟ ಅಧಿಕಾರಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು.