ನೀತಿ ಸಂಹಿತೆ ಉಲ್ಲಂಘನೆ : ಅಬಕಾರಿ ಇಲಾಖೆ ದಾಳಿ- 1.50 ಲಕ್ಷ ರೂ.ಗಳ ಮೌಲ್ಯದ ಮದ್ಯ ಜಪ್ತಿ

ಬಾಗಲಕೋಟೆ 07: ಲೋಕಸಭಾ ಚುನಾವಣೆ-24ರ ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯ ಮುಧೋಳ ವಲಯ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ಶನಿವಾರ ಅಬಕಾರಿ ಇಲಾಖೆ ದಾಳಿ ಮಾಡಿ ಒಟ್ಟು 1.50 ಲಕ್ಷ ರೂ.ಗಳ ಮೌಲ್ಯದ ಮದ್ಯವನ್ನು ಜಪ್ತ ಮಾಡಲಾಗಿದೆ. 

ಮುಧೋಳ ವ್ಯಾಪ್ತಿಯ ಬೆಳಗಲಿ ಸರ್ಕಲ್‌ನಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಒಟ್ಟು 1.50 ಲಕ್ಷ ರೂ.ಗಳ ಮೌಲ್ಯದ ಡಿಕೆ ಮತ್ತು ಓರಿಜನಲ್ ಚಾಯ್ಸ್‌ ವಿಸ್ಕಿಯ 3 ರಟ್ಟಿನ ಪೆಟ್ಟಿಗೆಗಳಲ್ಲಿದ್ದ 1080 ಟೆಟ್ರಾ ಪ್ಯಾಕೆಟ್ ಎರಡು ಸೇರಿ 259.200 ಲೀಟರ್ ಮದ್ಯ ಮತ್ತು 15,600 ಪವರ್ ಕೂಲ್ ಬೀರ್ ಜಪ್ತ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತನಾದ ಲಕ್ಷ್ಮಣ ಬಸಪ್ಪ ಚನ್ನಾಳನ್ನು ಸ್ಥಳದಲ್ಲಿಯೇ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. 

14 ಲೀಟರ್ ಕಳ್ಳಬಟ್ಟಿ ಜಪ್ತಿ : 

ಹುನಗುಂದ ವಲಯ ವ್ಯಾಪ್ತಿಯಲ್ಲಿ ಸೂಳೇಭಾವಿ ಗ್ರಾಮದಿಂದ 4 ಕಿ.ಮೀ ದೂರದ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಕಾನೂನು ಬಾಹಿರವಾಗಿ ಕಳ್ಳಬಟ್ಟಿ ಸರಾಯಿಯನ್ನು ತಯಾರಿಸಿ ಸಂಗ್ರಹಿಸಿಟ್ಟಿದ್ದರು. 7 ಬಾಟಲ್‌ಗಳಲ್ಲಿ ತಲಾ 2 ಲೀಟರನಂತೆ 14 ಲೀಟರ್ ಬಟ್ಟಿ ಸರಾಯಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಆರೋಪಿ ಕೃಷ್ಣಪ್ಪ ಹುವಪ್ಪ ಲಮಾಣಿ ಮೇಲ ಪ್ರಕರಣ ದಾಖಲಿಸಿಕೊಂಡು ಅಬಕಾರಿ ಉಪ ನೀರೀಕ್ಷಕ ಜೆ.ಬಿ.ಭಜಂತ್ರಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ನಲ್ಲಿ ಸಾಗಿಸುತ್ತಿದ್ದ 8.64 ಲೀಟರ್ ವಿಸ್ಕಿ ವಶಕ್ಕೆ 

ಬಾದಾಮಿ ಕ್ಷೇತ್ರದ ಕುಳಗೇರಿ ಖಾನಾಪೂರ ರಸ್ತೆಯಲ್ಲಿ ಅಬಕಾರಿ ಇಲಾಖೆ ವೀಕ್ಷಣೆ ನಡೆಸುತ್ತಿದ್ದ ವೇಳೆ ದ್ವಿಚಕ್ರವಾಹನ ತಪಾಸಣೆ ವೇಳೆ 8.64 ಲೀಟರ್ ಓರಿಜಿನಲ್ ಚಾಯ್ಸ್‌ ವಿಸ್ಕಿ ಮದ್ಯವನ್ನು ವಶಕ್ಕೆ ಪಡೆದುಕೊಂಡು ಆರೋಪಿ ಮೇಲೆ ಪ್ರಕರಣದ ದಾಖಲಿಸಲಾಗಿದೆ. ಸದರಿ ಮದ್ಯ ಒಟ್ಟು 53,841 ರೂ.ಗಳದ್ದಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ. 

ಕಳ್ಳಬಟ್ಟಿ ಪ್ರಕರಣ : ಅಪರಾಧಿಗಳಿಗೆ ಶಿಕ್ಷೆ ್ಘ ದಂಡ 

ಬಾದಾಮಿ ವಲಯ ವ್ಯಾಪ್ತಿಯಲ್ಲಿ ಜಾಲಿಹಾಳ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಕೆ ಮತ್ತು ಮಾರಾಟವನ್ನು ಮಾಡುತ್ತಿರುವದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳಾದ ಮಂಜುನಾಥ ಮಾದರ, ಕಳಕಪ್ಪ ಮಾದರ, ರಾಮಪ್ಪ ಮಾದರ, ದೇವಪ್ಪ ಮಾದರ ಇವರ ಮೇಲೆ ಅಬಕಾರಿ ನೀರೀಕ್ಷಕ ಮಂಜುನಾಥ ಹಗಳಗಾರ ಅಂತಿಮ ದೋಷಾರೋಪಣಾ ಪಟ್ಟಿಯನ್ನು ಬಾದಾಮಿ ಜೆ.ಎಂ.ಎಪ್‌.ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಸದರಿ ನ್ಯಾಯಾಲಯ ಇಲಾಖೆಯ ವಾದ ಆಲಿಸಿ ಪ್ರಕರಣದಲ್ಲಿ ಬಂಧಿಸಲ್ಪಟ್ಟ 4 ಜನ ಆರೋಪಿಗಳಿಗೆ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ.ಗಳ ದಂಡವಿಧಿಸಿ ಆದೇಶ ಹೊರಡಿಸಿದೆ.