ಲೋಕದರ್ಶನ ವರದಿ
ವಿಜಯಪುರ 22: ಯುಕೆಪಿ ಬಲದಂಡೆ ಕಾಲುವೆಗೆ 2005 ರಿಂದ ಇಲ್ಲಿಯವರೆಗೆ ಒಂದು ಬಾರಿಯೂ ಟೇಲ್ ಎಂಡ್ಗೆ ನೀರು ತಲುಪಿಲ್ಲ. ಈ ಭಾಗದ ರೈತರು ಕಾಲುವೆಗಾಗಿ ಜಮೀನು ಕಳೆದುಕೊಂಡರೂ ನೀರು ಇಲ್ಲದಂತಾಗಿದೆ. ಈ ಕೂಡಲೇ ಟೇಲ್ಎಂಡ್ವರೆಗೆ ನೀರು ಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ನಾಗಠಾಣ ಮಂಡಳ ಅಧ್ಯಕ್ಷ ಸದಾಶಿವ ಜಿತ್ತಿ ಹಾಗೂ ಎಪಿಎಂಸಿ ಉಪಾಧ್ಯಕ್ಷ ಬಾಬು ಚವಾಣ್ ಆಗ್ರಹಿಸಿದರು.
ಕಾಲುವೆ ಸುತ್ತಮುತ್ತ ಮುಳ್ಳುಕಂಟಿಗಳು ಬೆಳೆದಿದ್ದು, ಅಲ್ಲಲ್ಲಿ ಕಾಲುವೆ ಶಿಥಿಲಗೊಂಡಿದೆ. ಇವೆಲ್ಲವನ್ನೂ ಒಂದು ವಾರದೊಳಗೆ ಸರಿಪಡಿಸಿ ಕಾಲುವೆಗೆ ನೀರು ಹರಿಸದಿದ್ದರೆ ಈ ಭಾಗದ ರೈತರ ಸಹಯೋಗದೊಂದಿಗೆ ಕೆಬಿಜೆಎನ್ಎಲ್ ಕಾರ್ಯನಿರ್ಮಾಹಕ ಇಂಜಿನಿಯರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂ ಅಧ್ಯಕ್ಷ ಸತೀಶ ತೋಳನೂರ, ಶಿವಾನಂದ ಬಿರಾದಾರ, ದ್ರಾಕ್ಷಿ ಸಂಘದ ಅಧ್ಯಕ್ಷ ಕಾಶಿನಾಥ ಕಾಮಗೊಂಡ, ಸಂಗು ತೇಲಿ, ಹಣಮಂತ ಅವಟಿ, ಸಿದ್ದರಾಮ ಎಲಗೊಂಡ, ಬಸಗೊಂಡ ಸಾಲೂಟಗಿ, ಮಲ್ಲು ಕಾಮಗೊಂಡ ಇತರರು ಇದ್ದರು.
ವಿವಿಧ ಗ್ರಾಮಗಳ ರೈತರ ಸಂಕಷ್ಟ:
ಚಡಚಣ ಕಂದಾಯ ಹೋಬಳಿಯ ಹಾವಿನಾಳ, ನಿವರಗಿ, ರೇವತಗಾಂವ, ಹತ್ತಳ್ಳಿ, ಉಮರಜ, ಉಮರಾಣಿ, ಕೆರೂರ, ಲೋಣಿ, ಏಳಗಿ, ಮಣಂಕಲಗಿ, ಹಲಸಂಗಿ, ನಂದ್ರಾಳ, ಮರಗೂರ ಸೇರಿ ಮತ್ತಿತರ ಗ್ರಾಮಗಳ ರೈತರು ಬಲದಂಡೆ ಯೋಜನೆ ಕಾಲುವೆಯ ನೀರಿನ ಮೇಲೆ ಅವಲಂಬಿತರಾಗಿ ಕಡಲೆ, ಜೋಳ, ತೋಗರಿ, ಗೋಧಿ ಮತ್ತಿತರ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ಜಲ ನಿಗಮದ ಅಧಿಕಾರಿಗಳು ಕಾಲುವೆಗೆ ಒಂದು ಬಾರಿಯೂ ನೀರು ಹರಿಸಿಲ್ಲದ ಕಾರಣ ರೈತರ ಬೆಳೆಗಳು ಬಾಡುತ್ತಿವೆ. ಗುಣಾತ್ಮಕ ಬೆಳೆ ಕೈಸೇರದೆ ರೈತರಿಗೆ ತುಂಬ ನಷ್ಟವಾಗುತ್ತಿದೆ. ಕೂಡಲೇ ಅಧಿಕಾರಿಗಳು ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ನಾಗಠಾಣ ಮಂಡಳ ಅಧ್ಯಕ್ಷ ಸದಾಶಿವ ಜಿತ್ತಿ ಹಾಗೂ ಎಪಿಎಂಸಿ ಉಪಾಧ್ಯಕ್ಷ ಬಾಬು ಚವಾಣ್ ಆಗ್ರಹಿಸಿದರು.