ಹಾನಗಲ್ 09: ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ 15 ನೇ ಹಣಕಾಸು ಯೋಜನೆಯಡಿ 53 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಘಟಕ ಹಾಗೂ ಪ್ರಯೋಗಾಲಯದ ಕಟ್ಟಡವನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿದರು.
ತಾಲೂಕಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸಲು ಕಾಳಜಿ ವಹಿಸಲಾಗಿದೆ. ಸ್ಥಳೀಯವಾಗಿ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕ್ಷೇಮ ಮತ್ತು ಉಪ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ಶಿರಗೋಡ ಮತ್ತು ಕಲಕೇರಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಅನುದಾನ ಬಿಡುಗಡೆಯಾಗಲಿದೆ ಎಂದು ತಿಳಿಸಿದ ಶಾಸಕ ಮಾನೆ, ತಾಲೂಕಾಸ್ಪತ್ರೆಯಲ್ಲಿ ಸಹ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಆರೋಗ್ಯ ಘಟಕ ಹಾಗೂ ಪ್ರಯೋಗಾಲಯದ ಕಟ್ಟಡದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಲಭ್ಯ ಸೌಲಭ್ಯ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವೈದ್ಯಕರು ಹಿಂದೇಟು ಹಾಕುತ್ತಿದ್ದು, ಸಾರ್ವಜನಿಕರೂ ಸಹಕಾರ ನೀಡುವ ಮೂಲಕ ವೈದ್ಯಕೀಯ ಸೇವೆ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು.
ಆಡಳಿತ ವೈದ್ಯಾಧಿಕಾರಿ ಡಾ.ಬಸವರಾಜ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷ ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಮುಖಂಡರಾದ ಗುರುರಾಜ ನಿಂಗೋಜಿ, ರಾಜೂ ಗುಡಿ, ಡಾ.ಮಾರುತಿ ಚಿಕ್ಕಣ್ಣನವರ, ಮೇಕಾಜಿ ಕಲಾಲ, ಡಾ.ಅಖಿಲೇಷ ಮಾಳೋದೆ, ಬಸವರಾಜ ಡುಮ್ಮನವರ, ಇರ್ಫಾನ್ ಸೌದಾಗರ, ಪ್ರದೀಪ ಹರಿಜನ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.