ಬೆಂಗಳೂರು, ಜ.28, ವಿಭಿನ್ನವಾಗಿ ವಿಡಿಯೋ ಕಾಲ್ ನಲ್ಲಿ ಸಲಹೆ ಪಡೆದು ಅಂಗಡಿ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 23ವರ್ಷ ಪ್ರಾಯದ ನಾಗವಾರ ನಿವಾಸಿ ಸೈಯದ್ ಮುಹಮ್ಮದ್ ಫೈಸಲ್ ಬಂಧಿತ ಆರೋಪಿ.ಈತ ನಗರದ ಹಲವೆಡೆ ವಿಡಿಯೋ ಕಾಲ್ ನಲ್ಲಿ ಅಂಗಡಿಯ ಬೀಗ ಹೇಗೆ ಮುರಿಯುವುದರ ಬಗ್ಗೆ ತನ್ನ ಸ್ನೇಹಿತನ ಸಲಹೆ ಪಡೆದು ಅಂಗಡಿ ಕಳ್ಳವು ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರ ಆಧಾರದ ಮೇಲೆ ಅಶೋಕ ನಗರ ಪೊಲೀಸರು ಕಾರ್ಯಾಚರಣೆ
ಕೈಗೊಂಡಿದ್ದರು. ಲೈವ್ ಬ್ಯಾಂಡ್ ಶೋಕಿಗೆ ಬಿದ್ದ ಈತ ಸರಣಿ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಈಗಾಗಲೇ ಈತನ ವಿರುದ್ಧ 9ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ ಎಂದು ತಿಳಿದು ಬಂದಿದೆ. ಅಶೋಕ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವು ಕಡೆ ಕೃತ್ಯ ಎಸಗಿದ್ದ ಸೈಯದ್ ಮಹಮದ್ ಫೈಸಲ್ ಮಧ್ಯರಾತ್ರಿ ಒಂಟಿಯಾಗಿ ಬಂದು ಸರಣಿ ಅಂಗಡಿಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ. ಬಳಿಕ ಕದ್ದ ಮಾಲನ್ನು ಮಾರಿ ಲೈವ್ ಬ್ಯಾಂಡ್ಗೆ ತೆರಳುತ್ತಿದ್ದ ಎನ್ನಲಾಗಿದೆ. ಕಳ್ಳತನ ಮಾಡಲು ಈತ ತನ್ನ ಸಹಚರ ವಿಕ್ರಮ್ ಎಂಬಾತನಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಅಂಗಡಿಯ ಬೀಗ ತೋರಿಸುತ್ತಿದ್ದ. ಬಳಿಕ ಆತನ ಸಲಹೆ ಮೇರೆಗೆ ಬೀಗ ಮುರಿದು ಅಂಗಡಿ ದೋಚಿ ಪರಾರಿಯಾಗುತ್ತಿದ್ದ. ನಂತರ ಕದ್ದ ಮಾಲನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತನಿಂದ ಲಕ್ಷಾಂತರ ಮೌಲ್ಯದ ಬ್ರ‍್ಯಾಂಡೆಡ್ ವಾಚ್ಗಳು, ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಕ್ರಂ ಪರಾರಿಯಾಗಿದ್ದು, ಸದ್ಯ ಅಶೋಕನಗರ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.