ಹಗರನೂರು ಬಳಿ ಚಿರತೆಗೆ ವಾಹನ ಡಿಕ್ಕಿ: ಗಾಯ

ಹೂವಿನಹಡಗಲಿ 23: ತಾಲೂಕಿನ ಹಗರನೂರು ಸಮೀಪ ಸೋಮವಾರ ಚಿರತೆಗೆ ವಾಹನವೊಂದು ಡಿಕ್ಕಿ ಹೊಡೆದಿದ್ದು, ಗಾಯಗೊಂಡಿದ್ದ ಚಿರತೆ ಕೆಲಕಾಲ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯಲ್ಲಿ ಮಲಗಿ ಆತಂಕ ಸೃಷ್ಟಿಸಿತು.  

ರಾಜ್ಯ ಹೆದ್ದಾರಿ ದಾಟುವಾಗ ಚಿರತೆ ಅಪಘಾತಕ್ಕೀಡಾಗಿತ್ತು. ತೀವ್ರ ಅಸ್ವಸ್ಥಗೊಂಡು ರಸ್ತೆಯಲ್ಲೇ ಮಲಗಿತ್ತು. ಮಾರ್ಗದಲ್ಲಿ ಸಂಚರಿಸಿದ ಪ್ರಯಾಣಿಕರು ದೂರದಲ್ಲೇ ವಾಹನ ನಿಲ್ಲಿಸಿ ಭಾರೀ ಶಬ್ದ ಮಾಡಿದರೂ ಚಿರತೆ ಮೇಲೆ ಏಳಲಿಲ್ಲ. ನಂತರ ಕೆಲವರು ಧೈರ್ಯ ಮಾಡಿ ಹತ್ತಿರಕ್ಕೆ ಹೋಗಿ ಗಲಾಟೆ ಮಾಡಿದಾಗ ನಿಧಾನವಾಗಿ ಚಿರತೆ ಮೇಲೆದ್ದು ಪಕ್ಕದ ಕಿರು ಸೇತುವೆಯೊಳಗೆ ಅವಿತುಕೊಂಡಿತು. ಸಾರ್ವಜನಿಕರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು.  

’ಅಪಘಾತದಿಂದ ಚಿರತೆ ಗಾಯಗೊಂಡಿದೆ.  

ಹಗರನೂರು ಸಮೀಪ ಅಪಘಾತಕ್ಕೀಡಾಗಿ ಚಿರತೆ ರಸ್ತೆ ಮೇಲೆ ಮಲಗಿರುವುದು ಸ್ಥಳದಲ್ಲಿ ಅರಣ್ಯ ಸಿಬ್ಬಂದಿ ನಿಯೋಜಿಸಿದ್ದೇವೆ. ತಜ್ಞ ವೈದ್ಯರಿಂದ ಅರವಳಿಕೆ ಚುಚ್ಚುಮದ್ದು ಕೊಟ್ಟು ನಂತರ ಚಿರತೆಗೆ ಚಿಕಿತ್ಸೆ ನೀಡಲಾಗುವುದು. ಮೇಲಧಿಕಾರಿಗಳ ನಿರ್ದೇಶನದಂತೆ ಚಿರತೆ ಬೇರೆಡೆ ಸಾಗಿಸುತ್ತೇವೆ’ ಎಂದು ವಲಯ ಅರಣ್ಯಾಧಿಕಾರಿ ರೇಣುಕಮ್ಮ ತಿಳಿಸಿದರು.