ಶಿಗ್ಗಾವಿ 09: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನ ಕಲಾ ನಿರ್ದೇಶಕಿ, ಸಾಹಿತಿ ಡಾ.ವೇದಾರಾಣಿ ದಾಸನೂರ ಅವರಿಗೆ 'ಕಿತ್ತೂರು ರಾಣಿ ಚೆನ್ನಮ್ಮ' ರಾಜ್ಯ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದಾಸನೂರ ಅವರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ನೀಡಿ ಗೌರವಿಸಿದರು.ಡಾ.ವೇದಾರಾಣಿ ದಾಸನೂರ ಅವರು ಶಿಲ್ಪಕಲೆ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಗೆ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಸರಕಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ 2025 ರಲ್ಲಿ ಬಹುಮುಖ ಪ್ರತಿಭೆ ಹೊಂದಿರುವ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ಸರಕಾರ 2021ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಶ್ರೀಕ್ಷೇತ್ರ ಮಂತ್ರಾಲಯವು 2024 ರಲ್ಲಿ 'ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ' ನೀಡಿ ಗೌರವಿಸಿದೆ.
ಅಪ್ರತಿಮ ಪ್ರತಿಭೆ : ಚಿತ್ರ, ಶಿಲ್ಪ, ವಾಸ್ತುಶಿಲ್ಪ, ಸಾಹಿತ್ಯ, ಜಾನಪದ, ಸಂಸ್ಕತಿ, ನಿಸರ್ಗ, ಯೋಗ ಶಿಕ್ಷಣ ಹೀಗೆ ವಿಭಿನ್ನ ವಿಷಯಗಳ ಬಗ್ಗೆ ಅಪ್ರತಿಮಜ್ಞಾನ ಹೊಂದಿದ ವೇದಾರಾಣಿ ಅವರು ಬಹುಮುಖ ಪ್ರತಿಭೆ. ಪ್ರವಾಸೋದ್ಯಮ ಕೇವಲ ಮನರಂಜನೆ, ಮೋಜು, ಮಸ್ತಿಗೆ ಸೀಮಿತವಾಗಿರಬಾರದು, ಅದೊಂದು ನಾಡಿನ ಭವ್ಯ ಕಲಾಪರಂಪರೆ ಪ್ರತಿಬಿಂಬಿಸುವ ಹಾಗೂ ಪ್ರೇರಣಾತ್ಮಕ ಕಲಿಕಾ ಕೇಂದ್ರವಾಗಬೇಕೆಂಬ ಹಂಬಲದಿಂದ ಉತ್ಸವ ರಾಕ್‌ಗಾರ್ಡನ್‌ನ್ನು ಅಭಿವೃದ್ಧಿಪಡಿಸಿ 8 ವಿಶ್ವ ದಾಖಲೆಗಳನ್ನು ಹೊಂದಲು ಶ್ರಮಿಸಿದ್ದು ವಿಶೇಷ. ಪಸ್ತುತ ತಾಲೂಕಿನ ಶಿಶುವಿನಹಾಳದಲ್ಲಿ 'ಸಂತ ಶಿಶುನಾಳ ಶರೀಫ ಭಾವೈಕ್ಯತಾ ಉದ್ಯಾನವನ' ಹಾಗೂ ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಕಿತ್ತೂರುರಾಣಿ ಚೆನ್ನಮ್ಮ ಸಮಾಧಿ ಸ್ಥಳದಲ್ಲಿ ಅವರ ಜೀವನದ ಪ್ರಮುಖ ಘಟ್ಟಗಳನ್ನು ಆಧರಿಸಿದ ಶಿಲ್ಪಕಲಾ ಗ್ಯಾಲರಿ ನಿರ್ಮಿಸುತ್ತಿದ್ದಾರೆ. ಇವರಿಗೆ ಪತಿ ಸಾಮಾಜಿಕ ಉದ್ಯಮಿ ಪ್ರಕಾಶ ದಾಸನೂರ ಸಾತ್ ನೀಡಿದ್ದ ವಿಶೇಷ.