ಗುಳೇದಗುಡ್ಡದಲ್ಲಿ ವಿವಿ ಮಟ್ಟದ ಯೋಗ ಸ್ಪರ್ಧೆ

ಗುಳೇದಗುಡ್ಡ ಭಂಡಾರಿ ಮತ್ತು ರಾಠಿ ಕಾಲೇಜಿನಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿವಿ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ

ಗುಳೇದಗುಡ್ಡ 23: ವಿದ್ಯಾರ್ಥಿಗಳ ಸರ್ವತೋಮುಖದ ಅಭಿವೃದ್ಧಿಗೆ ದೈಹಿಕ ಶಿಕ್ಷಣ ಅತ್ಯಗತ್ಯವಾಗಿ ಬೇಕು. ದೈಹಿಕ ಶಿಕ್ಷಣ ಎಲ್ಲ ವಿಷಯಗಳ ಸಂಕಲನ ಎಂದು ಹುನಗುಂದ ವಸ್ತ್ರದ ಮಹಾವಿದ್ಯಾಲಯದ ಬಿ.ಎಸ್‌.ಚಳಗೇರಿ ಹೇಳಿದರು. 

ಅವರು ಪಟ್ಟಣದ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದಲ್ಲಿ ಬುಧವಾರ ಜರುಗಿದ 2021 ಮತ್ತು 22 ನೇ ಸಾಲಿನ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಪುರುಷ ಮತ್ತು ಮಹಿಳಾ ಏಕವಲಯ ಯೋಗ ಸ್ಪರ್ಧೆ ಹಾಗೂ ವಿಶ್ವ ವಿದ್ಯಾಲಯ ತಂಡದ ಆಯ್ಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ,  ದೈಹಿಕ ಶಿಕ್ಷಣವೇ ಯುವಕರಿಗೆ ಸರ್ವತೋಮುಖ ಅಭಿವೃದ್ಧಿಗೆ ಬುನಾದಿ.   ಯೋಗ ಒಂದು ಶಿಸ್ತು. ಶಿಸ್ತಿನಿಂದ ಸಾಧನೆ ಸಾಧ್ಯ. ಯೋಗ ಬರಿ ದೇಹ ದಂಡಿಸುವುದಲ್ಲ. ಅದು ಜೀವನ ನಡೆಸುವ ಕೌಶಲ್ಯವಾಗಿದೆ ಎಂದು ಹೇಳಿದರು. 

ಪಿ.ಇ.ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗ ಒಂದು ಜೀವನ ಪದ್ದತಿ ಹಾಗೂ ಜೀವನ ನಡೆಸುವ ಕೌಶಲ್ಯವಾಗಿದೆ. ಭಾರತವು ಜಗತ್ತಿಗೆ ಯೋಗ ಶಿಕ್ಷಣ ನೀಡುತ್ತಿರುವ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದೆ. ಅದೊಂದು ಹೆಮ್ಮೆಯ ವಿಷಯ ಎಂದರು.  

ದೈಹಿಕ ಶಿಕ್ಷಣ ನಿರ್ದೇಶಕ ಡಾ. ಚಿದಾನಂದ ವಿಶ್ವವಿದ್ಯಾಲಯ ಸ್ಪರ್ಧೆ ಹಾಗೂ ಆಯ್ಕೆಯ ಸಂಘಟಕರಾಗಿ ಹಾಗೂ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಡಾ.ಎಸ್‌.ಎಸ್‌.ದೊಡಮನಿ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. 

ವಿಜೇತ ಕಾಲೇಜುಗಳು : 2021 ಮತ್ತು 22 ನೇ ಸಾಲಿನ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಪುರುಷ ಮತ್ತು ಮಹಿಳಾ ಏಕವಲಯ ಯೋಗ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳು ಆಯ್ಕೆಯಾದವು. ಪುರುಷರ ವಿಭಾಗದಲ್ಲಿ ಚಾಂಪಿಯನ್ ಪಟ್ಟವನ್ನು ಮುನವಳ್ಳಿಯ ಅಜ್ಜಪ್ಪ ಗಡಮಿ ಕಾಲೇಜು ಪಡೆಯಿತು. ದ್ವಿತೀಯ ಸ್ಥಾನವನ್ನು ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯ ಗುಳೇದಗುಡ್ಡ ಹಾಗೂ ತೃತೀಯ ಸ್ಥಾನವನ್ನು ಸರ್ಕಾರಿ ಪ್ರಥಮದರ್ಜೆ ಕಾಲೇಜು ಬಾಗಲಕೋಟೆ ಇವು ಅನುಕ್ರಮವಾಗಿ ಪಡೆದುಕೊಂಡವು.  

ಮಹಿಳಾ ವಿಭಾಗದಲ್ಲಿ ಮುನವಳ್ಳಿಯ ಚನ್ನಬಸವ ಮಹಾವಿದ್ಯಾಲಯವು ಚಾಂಪಿಯನ್ ಆಗಿ ಹೊರಹೊಮ್ಮಿತು. ದ್ವಿತೀಯ ಸ್ಥಾನವನ್ನು ಗುಳೇದಗುಡ್ಡದ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯ ಪಡೆದುಕೊಂಡಿತು.  ತೃತೀಯ ಸ್ಥಾನವನ್ನು ಕೆಎಲ್‌ಇ ಬೆಳ್ಳುಬ್ಬಿ ಕಾಲೇಜು ಸವದತ್ತಿ ಪಡೆದುಕೊಂಡಿತು.