ಲೋಕದರ್ಶನ ವರದಿ
ಬಿ.ವಿ.ಬೆಲ್ಲದ ಕಾನೂನು ಕಾಲೇಜಿನಲ್ಲಿ ಎರಡು ದಿನ ರಾಷ್ಟ್ರೀಯ ಕಾನೂನು ಉತ್ಸವಕ್ಕೆ ಚಾಲನೆ
ಕಾನೂನು ವಿದ್ಯಾರ್ಥಿಗಳು ಕಾನೂನು ಶಾಸ್ತ್ರವನ್ನು ಆಳವಾಗಿ ಓದಲಿ: ಎಸ್.ವಿ.ಕುಲಕರ್ಣಿ
ಬೆಳಗಾವಿ 26: ನಿರಂತರ ಅಧ್ಯಯನ ಹಾಗೂ ಅಪಾರ ಕಾನೂನಿನ ಜ್ಞಾನದಿಂದ ಅನೇಕ ಪ್ರಕರಣಗಳಿಗೆ ನ್ಯಾಯ ಒದಗಿಸಲು ಸಾಧ್ಯ. ಹಾಗಾಗೀ ಯುವ ಕಾನೂನಿ ವಿದ್ಯಾರ್ಥಿಗಳು ಕಾನೂನಿನ ಜ್ಞಾನವನ್ನು ಸಂಪಾದಿಸಿಕೊಳ್ಳುವುದು ಅಗತ್ಯವಾಗಿದೆ. ಕಾನೂನು ಶಾಸ್ತ್ರದ ವ್ಯಾಪ್ತಿ ಬಹು ಸಂಕೀರ್ಣವಾದುದು ಎಂದು ಬೆಳಗಾವಿಯ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಎಸ್.ವಿ. ಕುಲಕರ್ಣಿ ಅವರು ಹೇಳಿದರು.
ಅವರು ಕೆ.ಎಲ್.ಇ. ಸಂಸ್ಥೆ ಬೆಳಗಾವಿಯ ಬಿ.ವಿ. ಬೆಲ್ಲದ್ ಕಾನೂನು ಕಾಲೇಜು ಅಮೃತ ಮಹೋತ್ಸವದ ಅಂಗವಾಗಿ ಏಪ್ರಿಲ್ 26 ಮತ್ತು 27 ರಂದು ‘ಕೆಎಲ್‌ಇ ಲಾ ಅಕಾಡೆಮಿ ಶೀರ್ಷಿಕೆ’ಯಡಿಯಲ್ಲಿ ರಾಷ್ಟ್ರೀಯ ಕಾನೂನು ಉತ್ಸವ (ಓಚಿಣಠಚಿಟ ಐಚಿತಿ ಈಣ) ಉದ್ಘಾಟಿಸಿ ಮಾತನಾಡಿದರು. ಉತ್ತಮ ವಕೀಲರಾಗಲು ಒಬ್ಬರು ಪ್ರಕರಣಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕು ಮತ್ತು ಕಾನೂನನ್ನು ಅನ್ವಯಿಸಬೇಕು, ಪುರಾವೆಗಳನ್ನು ಸಂಗ್ರಹಿಸಬೇಕು ಎಂದು ಅವರು ಕಾನೂನನ್ನು ತಮ್ಮ ವೃತ್ತಿಯಾಗಿ ಸ್ವೀಕರಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕಾನೂನು ವೃತ್ತಿಯು ಪವಿತ್ರವಾದ ವೃತ್ತಿಯಾಗಿದ್ದನ್ನು ಅದನ್ನು ಗೌರವಿಸಬೇಕು. ಪ್ರಸ್ತುತ ಯುಗದಲ್ಲಿ ಇ-ಗ್ರಂಥಾಲಯವು ನಮ್ಮ ಬೆರಳ ತುದಿಯಲ್ಲಿದೆ, ಆದ್ದರಿಂದ ಪ್ರಾಚೀನ ಕಾಲದಂತೆ ವಕೀಲರಿಗೆ ಇಂದು ಯಾವುದು ಕಷ್ಟಕರವಲ್ಲ. ಉತ್ತಮವಾದ ಓದಿನೊಂದಿಗೆ ಕಾನೂನು ಜ್ಞಾನವನ್ನು ವೃದ್ಧಿಸಿಕೊಂಡು ಕಕ್ಷಿದಾರನಿಗೆ ನ್ಯಾಯ ಒದಗಿಸಬೇಕೆಂದು ಹೇಳಿದರು.
ಗೋವಾದ ವಿ.ಎಂ.ಸಲ್ಗಾಂವ್ಕರ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಎಸ್.ಪಾಟೀಲ್ ಅವರು, ಪ್ರಾಸ್ತಾವಿಕವಾಗಿ ಮಾತನಾಡುತ್ತ, ವಕೀಲರು ಕಕ್ಷಿದಾರರ ವಿವಾದಗಳನ್ನು ಪರಿಹರಿಸುವಲ್ಲಿ ಮತ್ತು ಮಾನವ ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ಉದಯೋನ್ಮುಖ ವಕೀಲರಾಗಲು ಕಕ್ಷಿದಾರರ ಸಮಾಲೋಚನೆ, ಸಂಶೋಧನೆ, ಕರಡು ರಚನೆ, ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಸಾಕ್ಷಿಯೊಂದಿಗೆ ಹೇಗೆ ಸಂವಹನ ನಡೆಸಬೇಕೆಂಬುದನ್ನು ತಿಳಿದಿರಬೇಕೆಂದು ಹೇಳಿದರು.
ಹಿರಿಯ ನ್ಯಾಯವಾದಿ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಆರ್.ಬಿ. ಬೆಲ್ಲದ್ ಅವರು ಅಧ್ಯಕ್ಷತೆ ವಹಿಸಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಎಲ್ಲಕ್ಕೂ ಮುಖ್ಯವಾಗಿ ಇಂದಿನ ಕಾನೂನು ಶಾಸ್ತ್ರದಲ್ಲಿ ಆಗುತ್ತಿರುವ ಬದಲಾವಣೆಗಳೆಡೆಗೆ ಗಮನ ಹರಿಬೇಕು. ಜಾಗತೀಕರಣ ಸಂದರ್ಭದಲ್ಲಿ ಹೊಸ ಸವಾಲೆಡೆಗೆ ಬೆಳಕು ಬೀರಬೇಕು. ಕಾಲೇಜಿನಲ್ಲಿ ಒದಗಿಸಲಾದ ಎಲ್ಲಾ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಚಾರ್ಯ ಡಾ.ಜ್ಯೋತಿ ಹಿರೇಮಠ ಸ್ವಾಗತಿಸಿದರು. ಸ್ನೇಹಾ ದೊಡಮನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಐಕ್ಯೂಎಸ್‌ಸಿ ಸಂಯೋಜಕರಾದ ಡಾ.ಉಮಾದೇವಿ ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಲತಾ ಸರದಾರ ವಂದಿಸಿದರು. ಅನುಷಾ ಶಿಂಧೆ ನಿರೂಪಿಸಿದರು. ಇವೆಂಟ್ ಸಂಯೋಜಕ ಡಾ.ಸಂತೋಷ ಪಾಟೀಲ ಉಪಸ್ಥಿತರಿದ್ದರು.
ಉತ್ಸವದಲ್ಲಿ ಕಾನೂನು ಕ್ವಿಜ್ ಮತ್ತು ಕ್ಲೈಂಟ್ ಕೌನ್ಸಲ್ಟೇಶನ್ ಸ್ಪರ್ಧೆಗಳು ನಡೆದವು. ದೇಶದ್ಯಂತದಿಂದ 20 ಕ್ಕೂ ಹೆಚ್ಚು ತಂಡಗಳು ಬೇರೆ ಬೇರೆ ರಾಜ್ಯಗಳಿಂದ ಭಾಗವಹಿಸಿದ್ದವು.