ಮುದ್ದೇಬಿಹಾಳ ಕ್ಷೇತ್ರಕ್ಕೆ ಎರಡು ಆಂಬ್ಯುಲೆನ್ಸ್‌

ಮುದ್ದೇಬಿಹಾಳ ಕ್ಷೇತ್ರಕ್ಕೆ ಎರಡು ಆಂಬ್ಯುಲೆನ್ಸ್‌  Two ambulances for Muddebihal constituency


ಮುದ್ದೇಬಿಹಾಳ 04 : ತುರ್ತು ಸಂದರ್ಭಗಳಲ್ಲಿ ಹೃದಯಾಘಾತ, ರಸ್ತೆ ಅಪಘಾತ ಹಾಗೂ ಗರ್ಭಿಣಿಯರಿಗೆ ತಕ್ಷಣದ ಚಿಕಿತ್ಸೆ ಒದಗಿಸಲು ಮೈಸೂರು ಸಾಬೂನು ಮತ್ತು ಮಾರ್ಜಕ ನಿಗಮದ ಸಿಎಸ್‌ಆರ್ ಅನುದಾನದಡಿ ಮುದ್ದೇಬಿಹಾಳ ಕ್ಷೇತ್ರಕ್ಕೆ ಎರಡು ಆಂಬ್ಯುಲೆನ್ಸ್ಗಳನ್ನು ಒದಗಿಸಲಾಗಿದೆ ಎಂದು ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್‌. ನಾಡಗೌಡ ಅಪ್ಪಾಜಿ ಹೇಳಿದರು.  

ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಮೈಸೂರು ಸಾಬೂನು ಮತ್ತು ಮಾರ್ಜಕ ನಿಗಮದಿಂದ ಮಂಜೂರಾದ ಎರಡು ಆಂಬ್ಯುಲೆನ್ಸ್ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ ಅವರು ಮಾತನಾಡಿದರು.  

ಮುದ್ದೇಬಿಹಾಳ ಕ್ಷೇತ್ರಕ್ಕೆ ಆಂಬ್ಯುಲೆನ್ಸ್ಗಳ ಅಗತ್ಯವಿರುವ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರ ಸಹಕಾರದಿಂದ ಎರಡು ವಾಹನಗಳನ್ನು ಒದಗಿಸಲಾಗಿದೆ.

ಒಂದು ಆಂಬ್ಯುಲೆನ್ಸ್ನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಹಾಗೂ ಇನ್ನೊಂದನ್ನು ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ನೀಡುವ ಪ್ರಸ್ತಾವನೆ ಇತ್ತು. ಆದರೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕು ಆಸ್ಪತ್ರೆಗಳಿಗೆ ತುರ್ತು ಸೇವೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಎರಡೂ ವಾಹನಗಳನ್ನು ಮುದ್ದೇಬಿಹಾಳ ಕ್ಷೇತ್ರಕ್ಕೆ ಒದಗಿಸಲಾಗಿದೆ ಎಂದು ತಿಳಿಸಿದರು.  

ಮುದ್ದೇಬಿಹಾಳ ಪಟ್ಟಣದ ಕೆಬಿಎಂಪಿಎಸ್ ಶಾಲೆಯ ನವೀಕರಣಕ್ಕೆ ನಿಗಮದಿಂದ 1 ಕೋಟಿಗೂ ಅಧಿಕ ಅನುದಾನ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೆ, ದೋಷಗಳಿದ್ದರೆ ಅವುಗಳನ್ನು ಸರಿಪಡಿಸಿಕೊಂಡು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಸಂಗನಗೌಡ ಬಿರಾದಾರ, ಪುರಸಭೆ ಮಾಜಿ ಅಧ್ಯಕ್ಷ ಮೆಹಬೂಬ್ ಗೊಲಸಂಗಿ, ಗಣ್ಯರಾದ ರವಿ ಶಾಸ್ತ್ರಿ, ಸದು ಮಠ, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಮಲ್ಲನಗೌಡ ಬಿರಾದಾರ, ತಾಲೂಕು ಆರೋಗ್ಯಾಧಿಕಾರಿ ಸತೀಶ ತಿವಾರಿ, ಡಾ. ರಂಗನಾಥ ವೈದ್ಯ, ಪುರಸಭೆ ಮುಖ್ಯಾಧಿಕಾರಿ ಎಂ.ಬಿ. ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.