ವಾಷಿಂಗ್ ಟನ್, ನ 14 : ಟರ್ಕಿಯಲ್ಲಿ ನೆಲೆಸಿರುವ ಲಕ್ಷಾಂತರ ವಲಸಿಗರಿಗೆ ಬೆಂಬಲವಾಗಿ ಯೂರೋಪ್ ದೇಶಗಳು ಉದಾರ ನೆರವು ನೀಡಬೇಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟರ್ಕಿ ಹೆಚ್ಚಿನ ವೆಚ್ಚವನ್ನು ನಿಭಾಯಿಸುತ್ತಿದ್ದು, ಯೂರೋಪ್ ಹೆಚ್ಚು ನೆರವು ನೀಡಬೇಕಿದೆ ಎಂದು ಅವರು ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಅವರೊಂದಿಗೆ ಶ್ವೇತಭವನದಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಟರ್ಕಿಯಲ್ಲಿ ನಲವತ್ತು ಲಕ್ಷ ವಲಸಿಗರಿದ್ದು ಇದರಲ್ಲಿ ಸುಮಾರು ಮೂವತ್ತು ಲಕ್ಷಕ್ಕೂ ಅಧಿಕ ಜನರು ಸಿರಿಯಾಗೆ ಸೇರಿದವರಾಗಿದ್ದಾರೆ ಎಂದು ಎರ್ಡೊಗನ್ ತಿಳಿಸಿದ್ದಾರೆ.
ಈ ವಲಸಿಗರು ಯೂರೋಪ್ ಗೆ ಹೋಗಿದ್ದೇ ಆದಲ್ಲಿ ಅಲ್ಲಿ ಪರಿಸ್ಥಿತಿ ಹದಗೆಡಲಿದೆ ಎಂದು ಹೇಳಿದ ಟ್ರಂಪ್, ವಲಸಿಗರ ಕುರಿತಂತೆ ಯೂರೋಪ್ ನಾಯಕರೊಂದಿಗೆ ನೆರವಿನ ಕುರಿತು ಚರ್ಚೆ ನಡೆಸಿರುವುದಾಗಿಯೂ ಹೇಳಿದರು.