ಸಂಗೀತದ ನಿಧಿ ಪಂ. ಸಂಗಮೇಶ್ವರ ಗುರವ

ಪಂಡಿತ ಸಂಗಮೇಶ್ವರ ಗುರವ ಅವರು ಎಲೆಯ ಮರೆಯಲ್ಲಿರುವ ಕಾಯಿಯ ಹಾಗೆ ತಮ್ಮ ಜೀವನವನ್ನು ನಡೆಸಿದವರು. ಸರಳವಾದ ಬದುಕು, ಶ್ರದ್ಧೆಯ ಚಿಂತನೆಗಳಿಂದ ಬೆಳೆದ ಪಂ.ಗುರವ ಅವರು ಸಂಗೀತ ಸೇವಕರಾಗಿ, ಕಾವ್ಯದ ಉಪಾಸಕರಾಗಿ ಬದುಕಿನ ಘನತೆಯನ್ನು ಹೆಚ್ಚಿಸಿದವರು. ಸಂಗಮೇಶ್ವರರ ಗಾಯನದಲ್ಲಿ ರಾಗದ ಭಾವದೊಂದಿಗೆ ತಾಧ್ಯಾತ್ಮ ಬೆಸೆಯುವ ತುಡಿತವಿತ್ತು. ಅವರು ವಚನಗಳನ್ನೇ ಹಾಡಲಿ, ಅಭಂಗಗಳನ್ನೇ ಹಾಡಲಿ. ಕಬೀರ ಭಜನೆಗಳನ್ನೇ ಹಾಡಲಿ, ಪುರಂದರದಾಸರ ಪದಗಳನ್ನೇ ಹಾಡಲಿ ಭಕ್ತಿ ರಸ ಹೊರಸೂಸುತ್ತಿತ್ತು.

ಸಂಗಮೇಶ್ವರ ಗುರವ ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ 1931ರ ಡಿಸೆಂಬರ್ 7ರಂದು ಜನಿಸಿದರು. ತಂದೆ ಗಣಪತರಾವ್, ತಾಯಿ ಲೀಲಾವತಿ. ಅವರ ತಂದೆಯವರು ಜಮಖಂಡಿ ಸಂಸ್ಥಾನದಲ್ಲಿ ಆಸ್ಥಾನ ಗಾಯಕರಾಗಿದ್ದರು. ಗಣಪತರಾವ ಕಿರಾಣಾ ಫರಾಣೆಯ ಅಬ್ದುಲ್ ಕರೀಮಖಾನರ ಪ್ರಥಮ ಶಿಷ್ಯರಲ್ಲೊಬ್ಬರು. ತಂದೆ ಹಾಡುವಾಗ ಬಾಗಿಲ ಮರೆಯಲ್ಲಿ ನಿಂತು ಸಂಗಮೇಶ್ವರ ರಾಗಗಳನ್ನು ಕದ್ದು ಆಲಿಸುತ್ತಿದ್ದರು. ಅವರ ಅಜ್ಜ ಸಂಗಪ್ಪ ಜಮಖಂಡಿ ಸಂಸ್ಥಾನದಲ್ಲಿ ಆಸ್ಥಾನ ಗಾಯಕರಾಗಿದ್ದರೆ, ಮತ್ತೊಬ್ಬ ಅಜ್ಜ ರಾಮಚಂದ್ರಪ್ಪ ರಂಗನಟರಾಗಿದ್ದರು. ಇಂತಹ ಸ್ವರ ಪರಿವಾರದಲ್ಲಿ ಹುಟ್ಟಿ ಬೆಳೆದ ಸಂಗಮೇಶ್ವರರಿಗೆ ಹುಟ್ಟಿನೊಂದಿಗೆ ಸಂಗೀತ ರಕ್ತಗತವಾಗಿತ್ತು. ಒಂದು ದಿನ ತಂದೆ 'ಸಾರಂಗಿ ಬಾರಿಸು, ನೋಡೋಣ' ಅಂದರು. ಸಂಗಮೇಶ್ವರ ಬಹಾಗ ರಾಗವನ್ನು ನುಡಿಸಿದರು. ತಂದೆಗೆ ತುಂಬಾ ಸಂತೋಷವಾಯಿತು. ನಂತರ ಮಗನಿಗೆ 10-15 ದಿನಗಳಲ್ಲಿ ಸಾರಂಗ ನುಡಿಸುವುದನ್ನು ಕಲಿಸಿದರು.

ಜಮಖಂಡಿಯಲ್ಲಿದ್ದಾಗಲೇ ಸಂಗಮೇಶ್ವರ ಗುರವ ಅವರು 7ನೆಯ ವರ್ಗದ ಅಭ್ಯಾಸವನ್ನು ಮುಗಿಸಿದ್ದರು. 1948ರಲ್ಲಿ ಜಮಖಂಡಿ ಸಂಸ್ಥಾನವು ವಿಲೀನಗೊಂಡಿತು. ಹೀಗಾಗಿ ಅವರು ಬೆಳಗಾವಿಗೆ ಬಂದು ನೆಲೆಸಿದರು. ಸಂಗಮೇಶ್ವರ ಗುರವ ಅವರು ಬೆಳಗಾವಿಗೆ ಬಂದ ನಂತರ ಓದುವದಕ್ಕೆ ತಿಲಾಂಜಲಿಯಿತ್ತು, ಬೆಳಗಾವಿಯ ಶಹಾಪುರದಲ್ಲಿರುವ ಗಂಜೀಫ್ರಾಕ್ ಫ್ಯಾಕ್ಟರಿಯಲ್ಲಿ ದುಡಿಯಲಾರಂಭಿಸಿದರು. ಒಂದು ದಿನ ಆಕಸ್ಮಿಕವಾಗಿ ಮಗನ ಧ್ವನಿಯನ್ನು ಆಲಿಸಿದ ಅವರ ತಂದೆ ಬೆರಗಾಗಿ, ನೀನು ಇನ್ಮೇಲೆ ಸಾರಂಗಿಯನ್ನು ಬಿಟ್ಟುಬಿಡು, ನಿನ್ನ ಧ್ವನಿ ಬಾಳ ಛಲೋ ಅದ, ಇಂದಿನಿಂದ ನಿನಗ ಸಂಗೀತ ಪಾಠವನ್ನು ಶುರು ಮಾಡತೇನಿ ಅಂತಾ ತಿಳಿಸಿದರು. ಸಂಗಮೇಶ್ವರ ಸಂತೋಷದಿಂದ ಕುಣಿದಾಡಿದ. ಆಗ ಅವರಿಗೆ ಹನ್ನೆರಡು ವರ್ಷ. 

ಸಂಗಮೇಶ್ವರ ಗುರವ ಅವರು ಸಂಜೆಗೆ ಫ್ಯಾಕ್ಟರಿಯಿಂದ ಬರುವುದೇ ತಡ, ಸಂಗೀತದ ಪಾಠ ಪ್ರಾರಂಭಗೊಳ್ಳುತ್ತಿತ್ತು. ತಂದೆ ತರಕಾರಿ ತರಲು ಮಗನನ್ನು ಪೇಟೆಗೆ ಕರೆದುಕೊಂಡು ಹೋಗುತ್ತಿದ್ದರು. ಪೇಟೆಗೆ ಹೋಗಿ ಬರುವಾಗಲೂ ರಾಗಗಳ ಸೂಕ್ಷ್ಮಗಳನ್ನು ಗಣಪತರಾವ ದಾರಿಯುದ್ದಕ್ಕೂ ಹಾಡುತ್ತ ತಿಳಿಸಿ ಕೊಡುತ್ತಿದ್ದರು. ಅವರಿಗೆ ಸುತ್ತಮುತ್ತ ಜನರಿದ್ದಾರೆಂಬ ಪರಿವೆಯೇ ಇರುತ್ತಿರಲಿಲ್ಲ. ರಾತ್ರಿ ಸಂಗೀತ ಪಾಠದಿಂದ ಹೊತ್ತು ಸರಿದದ್ದೇ ಗೊತ್ತಾಗುತ್ತಿರಲಿಲ್ಲ. ಅಷ್ಟೊಂದು ಸಂಗೀತದ ಕಲಿಸುವ ಕಲಿಯುವ ಹುಚ್ಚು ನೆತ್ತಿಗೇರಿತ್ತು. ನೆರೆಹೊರೆಯವರು ಬೇಸತ್ತು ಪೋಲಿಸರಿಗೆ ದೂರು ಕೊಟ್ಟರು. ನಂತರ ಸಂಗೀತ ತರಬೇತಿಗಾಗಿ ಪ್ರತ್ಯೇಕ ಕೋಣೆ ಗೊತ್ತುಮಾಡಿಕೊಂಡರು. ಸಂಗಮೇಶ್ವರರು ಶೃದ್ಧೆಯಿಂದ ಸಂಗೀತವನ್ನು ಕಲಿತರು. ಹಬ್ಬದ ಸಂದರ್ಭಗಳಲ್ಲಿ ಸಣ್ಣಪುಟ್ಟ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟರು.

1950ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಕೇಂದ್ರದ ನಿದರ್ೇಶಕರಾದ ಗುಲ್ವಾಡಿ ಅವರು ಪ್ರತಿಭೆಗಳನ್ನರಸಿ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಧ್ವನಿ ಪರೀಕ್ಷೆಯನ್ನು ಏರ್ಪಡಿಸಿದ್ದರು. ಅಂದು ಸಂಗಮೇಶ್ವರ ನಂದ ರಾಗವನ್ನು ಹಾಡಿದರು. ಗುಲ್ವಾಡಿಯವರು ಬಹಳ ಮೆಚ್ಚಿಕೊಂಡು, ಆಕಾಶವಾಣಿಗೆ ಆಯ್ಕೆ ಮಾಡಿರುವುದಾಗಿ ಸ್ಥಳದಲ್ಲಿಯೇ ಘೋಷಿಸಿದರು. ಗುರವ ಅವರು ದೇಶದ ಎಲ್ಲ ಆಕಾಶವಾಣಿ ಕೇಂದ್ರಗಳಿಂದಲೂ ಹಾಡಿರುವರು. ಅವರು ಕಿರಾಣಾ ಫರಾನೆಯ ಅಧಿಕೃತ ಕಲಾವಿದರೆಂದು ಪ್ರಸಿದ್ಧಿ ಪಡೆದರು. 1952ರಲ್ಲಿ ಅವರು ಕೆಲವು ವರ್ಷ ಮುಂಬೈಯಲ್ಲಿ ನೆಲೆಸಿದರು. ಮುಂಬೈ ಆಕಾಶವಾಣಿಯಿಂದ ಅವರ ಗಾಯನ ಪ್ರಸಾರಗೊಳ್ಳತೊಡಗಿತು. ದೇಶದ ವಿವಿಧ ಸಂಗೀತ ಸಮ್ಮೇಳನ, ರೇಡಿಯೋ ಸಂಗೀತ ಸಮ್ಮೇಳನ ಹೀಗೆ ಅನೇಕ ಸಂಗೀತ ಸಮಾರಂಭಗಳಲ್ಲಿ ಅವರ ಗಾನವಾಹಿನಿ ದೇಶದ ತುಂಬೆಲ್ಲ ಹರಡಿತು. 1982ರಲ್ಲಿ ಗುರವ ಅವರು ಮರಳಿ ಧಾರವಾಡಕ್ಕೆ ವಗರ್ಾಯಿಸಿಕೊಂಡರು. 

1979ರಲ್ಲಿ ಆರಂಭಗೊಂಡ ಧಾರವಾಡ ಕನರ್ಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ವಿಭಾಗದಲ್ಲಿ ಡಾ.ಮಲ್ಲಿಕಾಜರ್ುನ ಮನಸೂರ ಅವರು ಮುಖ್ಯಸ್ಥರಾಗಿದ್ದರು. ಅವರು ಸಂಗಮೇಶ್ವರರಿಗೆ ತಕ್ಷಣ ಹೊರಟು ಬರುವಂತೆ ಟೆಲಿಗ್ರಾಮ್ ಸಂದೇಶ ಕಳುಹಿಸಿದರು. ಗುರವ ಅವರು ಬೆಳಗಾವಿಯಿಂದ ಬಂದು ಮನಸೂರ ಅವರನ್ನು ಭೇಟಿಯಾದರು. ಆಗ ಮನಸೂರ ಅವರು 'ಹಾಂಗೆ ಬಂದಿಯೇನು? ಲಗೇಜ ಏಕೆ ತರಲಿಲ್ಲ? ಹೋಗು ನಿನ್ನನ್ನು ಅಧ್ಯಾಪಕನನ್ನಾಗಿ ನೇಮಿಸಿರುವೆ. ನಿನ್ನ ಸರಂಜಾಮೆಲ್ಲ ತೆಗೆದುಕೊಂಡು ಬಾ ಎಂದು ಆದೇಶಿಸಿದರು. ಆಗಿನ ಕಾಲವೇ ಹಾಗಿತ್ತು. ಪಂ.ಸಂಗಮೇಶ್ವರ ಗುರವ ಅವರು ಸಂಗೀತ ಪ್ರಾಧ್ಯಾಪಕರಾಗಿ ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯೆ ಧಾರೆ ಎರೆದು 1991ರ ಡಿಸೆಂಬರ್ 7ರಂದು ನಿವೃತ್ತಿ ಹೊಂದಿದರು. ಅವರ ಶಿಷ್ಯ ಬಳಗದಲ್ಲಿ ಜಿ.ಕೆ.ಉಪಾಧ್ಯೆ, ನಿಶಾದ್ಸಿಂಗ್, ಸುಗುಣಾ ಚಂದಾವರಕರ, ನಾಗರಾಜ ಹವಾಲ್ದಾರ, ಆಶಾ, ಮೃತ್ಯುಂಜಯ ಶೆಟ್ಟರ, ರಾಜಪ್ರಭು ಧೋತ್ರೆ, ಗೀತಾ ಹೆಬ್ಳಿಕರ, ಅಶೋಕ ಹುಗ್ಗಣ್ಣವರ, ಕೈವಲ್ಯಕುಮಾರ ಗುರವ, ಸುಜಾತಾ ಗುರವ ಮೊದಲಾದವರು ಗುರುತಿಸಿಕೊಂಡಿದ್ದಾರೆ. 

ಪಂ.ಸಂಗಮೇಶ್ವರ ಗುರವ ಅವರು ಗಡಇಂಗ್ಲಜದ ಲೀಲಾವತಿ ಅವರನ್ನು ಮದುವೆಯಾದರು. ಅವರಿಗೆ ನಾಲ್ವರು ಮಕ್ಕಳು. ನಂದಿಕೇಶ್ವರ, ಶಶಿಕಲಾ, ಕೈವಲ್ಯಕುಮಾರ ಮತ್ತು ಸುಜಾತಾ. ಹಿರಿಯ ಮಗನಾದ ನಂದಿಕೇಶ್ವರ ಅವರು ಧಾರವಾಢ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ತಬಲಾವಾದಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಎರಡನೇ ಮಗಳು ಶಶಿಕಲಾ ಕುಲ್ಲಹಳ್ಳಿ ಅವರು ಕೋವಿಡ್ದಲ್ಲಿ ನಿಧನಹೊಂದಿದರು. ಕಿರಿಯ ಮಗನಾದ ಕೈವಲ್ಯಕುಮಾರ ಗುರವ ಅವರು ತಂದೆಯ ಗರಡಿಯಲ್ಲಿ ಪಳಗಿ, ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಿರಿಯ ಮಗಳು ಸುಜಾತಾ ಗುರವ ಅವರೂ ಸಹ ತಂದೆಯ ಗರಡಿಯಲ್ಲಿ ಪಳಗಿ, ಧಾರವಾಡದ ಕನರ್ಾಟಕ ಕಾಲೇಜಿನ ಸಂಗೀತ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಂ.ಸಂಗಮೇಶ್ವರ ಗುರವ ಅವರ ಇಬ್ಬರೂ ಪುತ್ರರು ಹಾಗೂ ಓರ್ವ ಪುತ್ರಿ ತಂದೆಯ ಹೆಜ್ಜೆಯಲ್ಲಿಯೇ ಹೆಜ್ಜೆಯಿಟ್ಟವರು. ಅವರೆಲ್ಲ ಮನೆತನದ ನಾಲ್ಕನೆಯ ಪೀಳಿಗೆಯ ಕಲಾವಿದರಾಗಿ ಹೊರಹೊಮ್ಮಿದ್ದಾರೆ. 

ಪಂ.ಸಂಗಮೇಶ್ವರ ಗುರವ ಅವರ ಜೀವನದಲ್ಲಿ ನಡೆದ ಎರಡು ಪ್ರಸಂಗಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಅಗತ್ಯವೆನಿಸುತ್ತದೆ. 1950ರಲ್ಲಿ ಸಾಂಗ್ಲಿ ಮ್ಯೂಜಿಕ್ ಸರ್ಕಲ್ ಆಶ್ರಯದಲ್ಲಿ ಮತ್ತು 1972ರಲ್ಲಿ ಪುಣೆಯಲ್ಲಿ ಡಾ.ಭೀಮಸೇನ್ ಜೋಶಿಯವರ ಅಭಿನಂದನಾ ಸಮಾರಂಭದಲ್ಲಿ ನಡೆದ ಪಂ.ಗುರವ ಅವರ ಸಂಗೀತ ಕಛೇರಿಗಳು. ಅಬ್ದುಲ್ ಕರೀಮಖಾನರ ಒಡನಾಡಿಯಾದ ನನ್ನೂಬಾಯಿ ಮಾಥ ಸರ್ಕಲ್ನ ಅಧ್ಯಕ್ಷರಾಗಿದ್ದರು. ಪಂ.ಗುರವ ಅವರ ಗಾಯನ ನಡೆದಾಗ ನನ್ನೂಭಾಯಿ ಜ್ವರ ಬಂದು ಮನೆಯಲ್ಲಿ ಮಲಗಿದ್ದರು. ಅವರು ತಮ್ಮ ಪತ್ನಿಗೆ  ರೇಡಿಯೋ ಹಚ್ಚು, ಪಕ್ಕದ ಮನೆಯ ರೇಡಿಯೋದಿಂದ ಕರೀಮಖಾನ್ರ ಗಾಯನ ಬರುತ್ತಿದೆ ಎಂದು ಹೇಳಿದರು. ಆಗ ಪತ್ನಿ ಈಗ ರಾತ್ರಿ 11.30 ಆಕಾಶವಾಣಿ ಕೇಂದ್ರಗಳು ಮುಚ್ಚಿರುತ್ತವೆ ಎಂದು ಸಮಜಾಯಿಷಿ ಹೇಳಿದರು. ನನ್ನೂಬಾಯಿ ಸಂಗೀತದ ಜಾಡು ಹಿಡಿದು ಹೊರಟರು. ಅವರ ಮನೆಯ ಸಮೀಪದಲ್ಲಿಯ ಸರ್ಕಲ್ಸ್ನಲ್ಲಿ ಸಂಗೀತ ಕಛೇರಿ ನಡೆದಿತ್ತು. ನನ್ನೂಬಾಯಿ ಖುಷಿಯಿಂದ ಜೋರಾಗಿ ಯಾರು ಹೇಳುತ್ತಾರೆ, ಅಬ್ದುಲ್ ಕರೀಮಖಾನ್ರು ಸ್ವರ್ಗಸ್ಥರಾಗಿರುವರೆಂದು? ಅವರು ಈ ಯುವ ಗಾಯಕನ ಕಂಠದಲ್ಲಿ ವಾಸವಾಗಿದ್ದಾರೆ ಎಂದು ಹೇಳಿದರು. ಮತ್ತೊಂದು ಪ್ರಸಂಗ. 1972ರಲ್ಲಿ ಭೀಮಸೇನ ಜೋಶಿ ಅವರಿಗೆ ಪದ್ಮಶ್ರೀ ಬಂದ ನಿಮಿತ್ತ, ಪುಣೆಯಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಹಿರಿಯ ಗಾಯಕಿ ಹೀರಾಬಾಯಿ ಬಡೋದೆಕರ ಮತ್ತು ಅನೇಕ ಗಾಯಕರು, ಸಂಗೀತಾಸಕ್ತರು ನೆರೆದಿದ್ದರು. ಪಂ.ಸಂಗಮೇಶ್ವರ ಗುರವ ಅವರ ಗಾಯನದಿಂದ ಭೀಮಸೇನ ಜೋಶಿಯವರು ಇನ್ನು ಮುಂದೆ ನನ್ನ ಗಾಯನ, ಹೀರಾಬಾಯಿ ಬಡೋದೆಕರ ಗಾಯನ, ಗಂಗೂಬಾಯಿ ಹಾನಗಲ್ಲರ ಗಾಯನ ಎಲ್ಲವನ್ನೂ ಸಂಗಮೇಶ್ವರ ಗುರವ ಅವರ ಕಂಠದಲ್ಲಿಯೇ ಕೇಳಿರಿ ಎಂದು ಸಂತಸ ವ್ಯಕ್ತಪಡಿಸಿದರು. 

ಅವರು ಎಂದೂ ಯಾವುದೇ ಪ್ರಶಸ್ತಿ ಪುರಸ್ಕಾರ, ಸನ್ಮಾನಗಳ ಹಿಂದೆ ಬಿದ್ದವರಲ್ಲ. ಅವರ ಸಂಗೀತ ಸೇವೆಯನ್ನು ಮೆಚ್ಚಿ, ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ಪುಣೆಯ ಪಂತನಾಥ ಮಹಾರಾಜರ ಸೂರಸೇನ್, ಮುಂಬೈಯ ಉಸ್ತಾದ ಫೈಯಾಜ್ ಅಹಮ್ಮದ್ಖಾನ್ ಸ್ಮಾರಕ ಟ್ರಸ್ಟಿನ ಕಿರಾಣಾ ಫರಾಣಾ ಪ್ರಶಸ್ತಿ, ಕನರ್ಾಟಕ ಸಂಗೀತ ನೃತ್ಯ ಅಕಾಡೆಮಿಯ ಸಂಗೀತ ಪ್ರಶಸ್ತಿ, ಕರ್ನಾ ಟಕ ಸರ್ಕಾರದ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಧಾರವಾಡದ ಪಂ.ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಪಂ.ಪುಟ್ಟರಾಜ ಸಮ್ಮಾನ ರಾಷ್ಟ್ರೀಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಣಿಕ ಮರ್ಮಾ ಪುರಸ್ಕಾರ, ನಿಜಗುಣ ಪುರಂದರ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಅವರ ಗೌರವಾರ್ಥ ಕನರ್ಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇತ್ತೀಚೆಗೆ ಸಾಕ್ಷ್ಯ ಚಿತ್ರವನ್ನು ಹೊರತಂದಿದೆ. 

ಪಂ.ಸಂಗಮೇಶ್ವರ ಗುರವ ಅವರು ನಾಲ್ಕು ಭಾಷೆಗಳನ್ನು ಬಲ್ಲವರಾಗಿದ್ದರು. ಸಂಗೀತದಲ್ಲಿ ಭಾವವು ರಾಗದೊಂದಿಗೆ ಬೆಸೆದು, ತಾನಗಳು ತಾವೇ ತಾವಾಗಿ ಹೊರಹೊಮ್ಮಿ, ಹಾಡುವ ರಾಗ ಪ್ರತಿಸಲ ಹೊಸತು ಎನಿಸಬೇಕು ಎಂಬುದು ಅವರ ವ್ಯಕ್ತಿತ್ವದ ಪ್ರಧಾನ ಗುಣವಾಗಿತ್ತು. ಅವರ ಗಾಯನದಲ್ಲಿರುವುದು ಸ್ವರಶುದ್ಧತೆ, ಶಾಸ್ತ್ರ ಶುದ್ಧತೆ ಮತ್ತು ಶ್ರೀಮದ್ಗಾಂಭೀರ್ಯ. ಅವರ ಗಾಯನ ಶೋತೃಗಳನ್ನು ಭಾವಸಾಗರದಲ್ಲಿಮುಳುಗಿಸುತ್ತಿತ್ತು. ಅವರು ಸೃಷ್ಟಿಸಿದ ರಾಗಗಳಾದ ಸಂಗಮ, ರುದ್ರ, ಗೌರಿಧರ, ಗರಗಜಗಳೂ ಭಕ್ತಿ ಪ್ರಧಾನವಾಗಿವೆ. ಪಂ.ಸಂಗಮೇಶ್ವರರದು ಸರಳ ಸಾತ್ವಿಕ ಬದುಕು. ಅವರು ಅತ್ಯುತ್ತಮ ಸಂಗೀತ ಗುರುಗಳಾಗಿದ್ದರು. ಕಲಿಸುವಲ್ಲಿ ತುಂಬಾ ಕಟ್ಟುನಿಟ್ಟು, ಸಮಯ ಪಾಲನೆ, ಶೃತಿ-ಲಯಗಳ ಬಗ್ಗೆ ಅಪಾರ ಭಕ್ತಿ ವಿಶ್ವಾಸವನ್ನು ಹೊಂದಿದ್ದರು. ಅವರು ಜನರ ಪ್ರೀತಿ, ವಿಶ್ವಾಸವನ್ನು ಅಪಾರವಾಗಿ ಪಡೆದವರು. ಇಂತಹ ಧೀಮಂತ ಶ್ರೇಷ್ಠ ಗಾಯಕ ತಮ್ಮ 86ನೇ ವಯಸ್ಸಿನಲ್ಲಿ ಮೇ7, 2014ರಂದು ನಾದಲೋಕದಲ್ಲಿ ಲೀನವಾದರು. ಸಂಗೀತಲೋಕದ ಸಾಧಕ ಪಂ.ಸಂಗಮೇಶ್ವರ ಗುರವ ಅವರ ಕೊಡುಗೆ ಅಪಾರ, ಅವಿಸ್ಮರಣೀಯವಾದುದು. 

                                                             -ಸುರೇಶ ಗುದಗನವರ

               ಧಾರವಾಡ