ಅನರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ: ಸೇವೆಯಿಂದ ಅಮಾನತ್ತು

ಬ್ಯಾಡಗಿ 11: ಅನರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿ ತಹಶೀಲ್ದಾರ ಆಗಿ ಸೇವೆ ಸಲ್ಲಿಸುತ್ತಿದ್ದ ಶರಣಮ್ಮ ಕಾರಿ (ಸದ್ಯ ವಿಜಯನಗರ ಜಿಲ್ಲೆ:ಹೂವಿನಹಡಗಲಿ ತಹಶೀಲ್ದಾರ) ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸರ್ಕಾರ ಆದೇಶ ಹೊರಡಸಿದೆ. 

 ಕಳೆದ 2019 ರಲ್ಲಿ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ 8.57.338/-ರೂ.ಗಳನ್ನು ಒಟ್ಟು 29 ಜನ ಅನರ್ಹ ಫಲಾನು ಭವಿಗಳಿಗೆ ಹಣ ವರ್ಗಾವಣೆ ಮಾಡಿದ್ದ ಪ್ರಕರಣಕ್ಕೆ ಸಂಭಂಧಿಸಿದಂತೆ ಅಮಾನತುಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ. ಈ ಕುರಿತು ಅಂದಿನ ಅಪರ ಜಿಲ್ಲಾಧಿಕಾರಿ ಯೋಗೇಶ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಶರಣಮ್ಮ ಕಾರಿ ಸೇರಿದಂತೆ ಇನ್ನಿತರರ ವಿರುದ್ಧ (ಸಿ.ಆರ್‌.26/2020) ದೂರು ಸಲ್ಲಿಸಿದ್ದರು, ಪೋಲಿಸರು 409, 420 ಐಪಿಸಿ ಸೆಕ್ಷನ್ನ ಹಾಕಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸ್ಥಳೀಯ ಪೋಲಿಸರು ತಹಶೀಲ್ದಾರ ಶರಣಮ್ಮ ಕಾರಿ ಬ್ಯಾಡಗಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ (ಚಾರ್ಜಶೀಟ್) ಸಲ್ಲಿಸಿದ್ದರು. ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು, ಕರ್ನಾಟಕ ನಾಗರಿಕ ಸೇವಾ (ಕೆಸಿಎಸ್‌ಆರ್) ಅಧಿನಿಯಮದಡಿ ಕರ್ತವ್ಯ ಲೋಪವೆಂದು ಪರಿಗಣಿಸಿ ತಹಶೀಲ್ದಾರ ಶರಣಮ್ಮ ಕಾರಿ ಅವರನ್ನು ಅಮಾನತಗೊಳಿಸಿ ಆದೇಶಿಸಿದೆ.