ಉದಯ ಭವನದಲ್ಲಿ ಲಘು ಉದ್ಯೋಗ ಭಾರತಿ ಮಹಿಳಾ ಘಟಕದಿಂದ ತರಬೇತಿ ಹಾಗೂ ಮಹಿಳಾ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಯಶಸ್ವಿ

ಉದಯ ಭವನದಲ್ಲಿ ಲಘು ಉದ್ಯೋಗ ಭಾರತಿ ಮಹಿಳಾ ಘಟಕದಿಂದ ತರಬೇತಿ ಹಾಗೂ ಮಹಿಳಾ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಯಶಸ್ವಿ Training session and exhibition of products by women entrepreneurs, organized by the Laghu Udyog Bha

ಲೋಕದರ್ಶನ ವರದಿ 

ಬೆಳಗಾವಿ 14: ಲಘು ಉದ್ಯೋಗ ಭಾರತಿ, ಬೆಳಗಾವಿ ಮಹಿಳಾ ಘಟಕದ ವತಿಯಿಂದ ರಾಜ್ಯ ಉಪಾಧ್ಯಕ್ಷೆ ಡಾ. ಪ್ರಿಯಾ ಪುರಾಣಿಕ್ ಅವರ ನೇತೃತ್ವದಲ್ಲಿ ಉದಯ ಭವನದಲಿ ತರಬೇತಿ ಶಿಬಿರ ಹಾಗೂ ಮಹಿಳಾ ಉದ್ಯಮಿಗಳು ತಯಾರಿಸಿದ ಕೈತಯಾರಿಕಾ ಉತ್ಪನ್ನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.ಮಹಿಳೆಯರಲ್ಲಿ ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ಹಾಗೂ ಆತ್ಮನಿರ್ಭರತೆಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತರಬೇತಿ ಶಿಬಿರದಲ್ಲಿ ವಿವಿಧ ಕಲೆ ಮತ್ತು ಶಿಲ್ಪ ಕೌಶಲ್ಯಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಗಿದ್ದು, ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಮಹಿಳಾ ಉದ್ಯಮಿಗಳು ತಯಾರಿಸಿದ ವೈವಿಧ್ಯಮಯ ಕೈತಯಾರಿಕಾ ಉತ್ಪನ್ನಗಳ ಪ್ರದರ್ಶನವೂ ಗಮನ ಸೆಳೆಯಿತು. ಪ್ರದರ್ಶನಕ್ಕೆ ಭೇಟಿ ನೀಡಿದವರು ಉತ್ಪನ್ನಗಳ ಗುಣಮಟ್ಟ, ಸೃಜನಶೀಲತೆ ಹಾಗೂ ನವೀನತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಲಿದ್ದು, ಸ್ವಯಂ ಉದ್ಯೋಗದ ಅವಕಾಶಗಳನ್ನು ವಿಸ್ತರಿಸಲು ಸಹಕಾರಿಯಾಗಲಿವೆ ಎಂದು ಸಂಘಟಕರು ತಿಳಿಸಿದರು.ಲಘು ಉದ್ಯೋಗ ಭಾರತಿ, ನವದೆಹಲಿಯ ರಾಷ್ಟ್ರೀಯ ಸಂಘಟನಾ ಮಹಾಮಂತ್ರಿ ಆದರಣೀಯ  ಪ್ರಕಾಶಚಂದ್ರಜಿ ಅವರು ಮಾತನಾಡಿ, ಎಲ್ಲಾ ಉದ್ಯಮಿಗಳು ಸಂಘಟನೆಯ ಮನೋಭಾವದಿಂದ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. 

ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳು ಪ್ರತಿಯೊಬ್ಬ ಉದ್ಯಮಿಯ ಜೀವನದಲ್ಲಿ ಎದುರಾಗುವುದು ಸಹಜ. ಆದರೆ ಸಾಮೂಹಿಕ ಪ್ರಯತ್ನ, ಪರಸ್ಪರ ಸಹಕಾರ ಮತ್ತು ದೃಢ ಸಂಕಲ್ಪದ ಮೂಲಕ ಇಂತಹ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ತಮ್ಮ ಉದ್ಯಮಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.